ಕರೋಪಾಡಿ ಜಲೀಲ್ ಹತ್ಯೆ ಪ್ರಕರಣ: ಹಿಂಜಾವೇ ಕಾರ್ಯಕರ್ತರ ಕೃತ್ಯ; ಜೆಡಿಎಸ್ ಜಿಲ್ಲಾಧ್ಯಕ್ಷರ ಆರೋಪ
ಮಂಗಳೂರು, ಮೇ 1: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಕೃತ್ಯವಾಗಿದ್ದು, ಆದರೆ ಪೊಲೀಸರು ಸಂಘಟನೆಯ ಹೆಸರನ್ನು ಮರೆಮಾಚಲು ಭೂಗತ ಪಾತಕಿ ವಿಕ್ಕಿಶೆಟ್ಟಿ ಹೆಸರನ್ನು ಬಳಕೆ ಮಾಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಆರೋಪಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲೀಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಪ್ರಮುಖರು ಹಿಂದೂ ಜಾಗರಣಾ ವೇದಿಕೆಯಲ್ಲಿದ್ದವರಾಗಿದ್ದಾರೆ. ಪ್ರಕರಣವು ಕೋಮುಬಣ್ಣ ಪಡೆಯುವುದನ್ನು ತಡೆಯಲು ಪೊಲೀಸರು ವಿಕ್ಕಿಶೆಟ್ಟಿಯ ಹೆಸರನ್ನು ಬಳಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಕರೋಪಾಡಿ ಜಲೀಲ್ ಹತ್ಯೆ ಪ್ರಕರಣ ಹಾಗೂ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಕಾರ್ಯಾಚರಣೆಗೆ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ನಳಿನ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ
ಪಜೀರು ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನ ಸಹೋದರಿ ಸಹಿತ ಮೂವರನ್ನು ಬಂಧಿಸಿ ಪ್ರಕರಣದ ಸತ್ಯಾಂಶವನ್ನು ಹೊರಗೆಳೆದಿದ್ದಾರೆ. ಆದರೆ, ಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯ ಮಾಡಲು ಹೊರಟಿದ್ದು ಖಂಡನೀಯ. ಒಬ್ಬ ಹಿಂದೂ ಹತ್ಯೆಯಾದರೆ, ಅದು ಬಿಜೆಪಿಗನ ಹತ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಅಪರಾಧ ಯಾರು ಮಾಡಿದರೂ ಅಪರಾಧದ ದೃಷ್ಟಿಯಿಂದಲೇ ನೋಡಬೇಕೆ ಹೊರತು ರಾಜಕೀಯ ಬಣ್ಣ ಪಡೆಯಬಾರದು. ಆದರೆ, ಪ್ರತಿಭಟನೆಯೊಂದರಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದ.ಕ. ಜಿಲ್ಲೆಯನ್ನು ಹೊತ್ತಿಸುವ ಹೇಳಿಕೆ ನೀಡಿರುವುದರ ಬಗ್ಗೆ ರಾಜ್ಯ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.
ಕಾರ್ತಿಕ್‌ರಾಜ್ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗೆ ಸಚಿವ ಖಾದರ್ ಅವರು ಕೊಣಾಜೆ ಠಾಣಾ ಇನ್ಸ್‌ಪೆಕ್ಟರ್ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾರ್ತಿಕ್‌ರಾಜ್ ಕುಟುಂಬಸ್ಥರನ್ನು ತನಿಖೆಗೆ ಒಳಪಡಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದರು ಎಂದು ಖಾದರ್ ಹೇಳಿದ್ದಾರೆ. ಆದರೆ, ಆರು ತಿಂಗಳವರೆಗೆ ಖಾದರ್ ಯಾಕೆ ಮೌನ ವಹಿಸಿದ್ದರು ಎಂದು ಮುಹಮ್ಮದ್ ಕುಂಞಿ ಪ್ರಶ್ನಿಸಿದರು.
ಶಾಸಕ ಝಮೀರ್‌ರಿಂದ ಸಮುದಾಯ ಒಡೆಯುವ ತಂತ್ರ
ಶಾಸಕ ಝಮೀರ್ ಅಹ್ಮದ್ ಅವರು ಪೊಲೀಸ್ ದೌರ್ಜನ್ಯಕ್ಕೊಳಗಾದ ಅಹ್ಮದ್ ಖುರೇಶಿ ಮನೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ ಸಮುದಾಯದ ಒಗ್ಗಟ್ಟು ಮುರಿಯಲು ಪ್ರಯತ್ನಿಸಿದ್ದಾರೆ. ಅಲ್ಲದೆ, ‘ಮಂಗಳೂರು ಚಲೋ’ಗೆ ಜೆಡಿಎಸ್ ಬೆಂಬಲ ಇಲ್ಲ ಎಂದಿದ್ದಾರೆ ಎಂದು ಮುಹಮ್ಮದ್ ಕುಂಞಿ ಇದೇ ಸಂದರ್ಭ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಾಜಿ ಜಿಲ್ಯಾಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ನಗರಾಧ್ಯಕ್ಷ ವಸಂತ ಪೂಜಾರಿ, ಹೈದರ್ ಪರ್ತಿಪಾಡಿ ಉಪಸ್ಥಿತರಿದ್ದರು.