ನಿವೃತ್ತ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಕಾರ್ಡ್ ವಿತರಣೆ
ಉಡುಪಿ, ಮೇ 1: ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಜಿಲ್ಲಾ ಯುವ ಮೊಗವೀರ ಸಂಘಟನೆ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಜಿಲ್ಲಾ ಪೊಲೀಸ್ ಹಾಗೂ ನಿವೃತ್ತ ಪೊಲೀಸ್ ಸಿಬ್ಬಂದಿಗೆ ಮಣಿಪಾಲ ಸುರಕ್ಷಾ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭವು ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಜರಗಿತು.
ಕಾರ್ಡ್ ವಿತರಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಮಾತನಾಡಿ, ಆರೋಗ್ಯ ಕಾರ್ಡ್ ಸೌಲಭ್ಯದಿಂದ ಪೊಲೀಸರಿಗೆ ಬಹಳಷ್ಟು ಅನುಕೂಲ ವಾಗಿದೆ. ವ್ಯವಸ್ಥೆ ಬೇರೆ ಯಾವ ಜಿಲ್ಲೆಯಲ್ಲಿ ಇರದಿರುವುದರಿಂದ ಉಡುಪಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಸರಕಾರದಿಂದ ಸೇವೆಯಲ್ಲಿರುವ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆ ಇದ್ದು, ನಿವೃತ್ತ ಪೊಲೀಸರಿಗೆ ಯಾವುದೇ ಸೌಲಭ್ಯಗಳಿಲ್ಲ. ಹಾಗಾಗಿ ಈ ಇದು ಶ್ಲಾಘನೀಯ ಕೆಲಸವಾಗಿದೆ. ಈ ಸೇವೆ ಜಿಲ್ಲೆಯ ಇತರ ಇಲಾಖೆಗೂ ವಿಸ್ತರಣೆ ಮಾಡಬೇಕು ಎಂದು ಅವರು ತಿಳಿಸಿದರು.
ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಮಾತನಾಡಿ, ಪ್ರತಿವರ್ಷ 25 ಸಾವಿರ ಕುಟುಂಬಗಳ 1.25 ಲಕ್ಷ ಮಂದಿಗೆ ಈ ಕಾರ್ಡ್ ಸೌಲಭ್ಯ ನೀಡಲಾಗುತ್ತಿದೆ. ಸಮಾಜದಲ್ಲಿ ಪೊಲೀಸರು ಬಹಳ ದೊಡ್ಡ ಹೊಣೆಗಾರಿಕೆ ಹೊಂದಿರುವುದರಿಂದ ಅವರಿಗೆ ಈ ಸೇವೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಣಿಪಾಲ ಎಂಐಟಿ ನಿರ್ದೇಶಕ ಡಾ.ಜಿ.ಕೆ.ಪ್ರಭು ವಹಿಸಿ ದ್ದರು. ಜಿಲ್ಲಾ ನಿವೃತ್ತ ಪೊಲೀಸ್ ಸಿಬಂದಿ ಸಂಘದ ಅಧ್ಯಕ್ಷ ಪ್ರಭುದೇವ ಮಾಣೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಉಪಸ್ಥಿತರಿದ್ದರು. ಯುವ ಮೊಗವೀರ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಸ್ವಾಗತಿಸಿದರು