ಕಾಶ್ಮೀರದಲ್ಲಿ ಸೇನೆಯಿಂದ ಹೀಗೊಂದು ವಿಶಿಷ್ಟ ತರಬೇತಿ

Update: 2017-05-01 10:07 GMT

ಶ್ರೀನಗರ,ಮೇ.1 : ಭಾರತೀಯ ಸೇನೆಯ ‘ಕಾಶ್ಮೀರ್ ಸೂಪರ್-40’ ಯೋಜನೆಯಂಗವಾಗಿ ನೀಡಲಾದ ತರಬೇತಿಯ ಫಲವಾಗಿ ಜಮ್ಮು ಕಾಶ್ಮಿರದ 26 ಹುಡುಗರು ಹಾಗೂ ಇಬ್ಬರು ಹುಡುಗಿಯರು ಐಐಟಿ-ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಯುವಕರಿಗೆ ಈ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವಂತೆ ಮಾಡುವ ಉದ್ದೇಶದಿಂದ ಸೇನೆ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿತ್ತು.

ಈ ವರ್ಷದ ಯಶಸ್ಸಿನ ಪ್ರಮಾಣ ಹಿಂದಿನ ದಾಖಲೆಗಳನ್ನು ಮೀರಿಸಿದೆ. ಶೇ 78ರಷ್ಟು ಯಶಸ್ಸು ಸಾಧಿಸುವ ಮೂಲಕ ಯಾವುದೇ ಅತ್ಯುತ್ತಮ ಐಐಟಿ ಕೋಚಿಂಗ್ ಸೆಂಟರಿಗಿಂತ ನಾವು ಕಡಿಮೆಯಿಲ್ಲ ಎಂದು ತೋರಿಸಿದ್ದೇವೆ, ಎಂದು ಸೇನೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಸೇನೆಯ ತರಬೇತಿ ಪಾಲುದಾರ ‘ಸೆಂಟರ್ ಫಾರ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಎಂಡ್ ಲರ್ನಿಂಗ್ ಎಂಡ್ ಪೆಟ್ರೋನೆಟ್ ಎಲ್ ಎನ್ ಜಿ’ ಈ ತರಬೇತಿ ಕಾರ್ಯಕ್ರಮವನ್ನು 2013ರಿಂದ ನೀಡುತ್ತಿದ್ದು ಈ ಬಾರಿ ಗರಿಷ್ಠ ಮಂದಿ ತೇರ್ಗಡೆ ಹೊಂದಿದ್ದಾರೆ. ಈ ವರ್ಷದ ಬ್ಯಾಚಿನಲ್ಲಿ ಪ್ರಪ್ರಥಮ ಬಾರಿಗೆ ಐದು ಮಂದಿ ಹುಡುಗಿಯರಿಗೆ ತರಬೇತಿ ನೀಡಲಾಗಿದ್ದರೆ ಅವರಲ್ಲಿ ಇಬ್ಬರು ಯಶಸ್ವಿಯಾಗಿದ್ದಾರೆ.

ಈ ತರಬೇತಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳನ್ನು ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ರಾಜ್ಯಾದ್ಯಂತ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆಯ ಮುಖಾಂತರ ಆರಿಸಲಾಗುತ್ತದೆ. ತರಬೇತಿ ಹಾಗೂ ವಸತಿ ವ್ಯವಸ್ಥೆ ಉಚಿತವಾಗಿದೆ.

ಐಐಟಿ ಪರೀಕ್ಷೆ ಹೊರತಾಗಿ ಕಾಶ್ಮೀರ್-ಸೂಪರ್ 40 ವಿದ್ಯಾರ್ಥಿಗಳು ದೇಶಾದ್ಯಂತ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಪರೀಕ್ಷೆಯಲ್ಲೂ ಯಶಸ್ಸು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News