"ರಂಗೋತ್ಸವ -2017" ಮಕ್ಕಳ ಬೇಸಿಗೆ ಶಿಬಿರ ಸಮಾರೋಪ
ಮಂಗಳೂರು, ಮೇ 1: ಬೇಸಿಗೆ ಶಿಬಿರಗಳ ಚಟುವಟಿಕೆಗಳು ಮಕ್ಕಳಲ್ಲಿ ಉತ್ಸಾಹ ಹಾಗೂ ಆತ್ಮವಿಶ್ವಾಸ ವನ್ನು ಬೆಳೆಸುವುದರೊಂದಿಗೆ ಅವರನ್ನು ಸಾಮಾಜಿಕ ಕಳಕಳಿಯುಳ್ಳ ಸತ್ಪ್ರಜೆಗಳನ್ನಾಗಿ ರೂಪಿಸಲು ಸ್ಫೂರ್ತಿಯಾಗಬೇಕು. ಈ ಚಿಂತನೆಯನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿರುವ ರಂಗ ಸ್ವರೂಪದ ಕಾಳಜಿ ಶ್ಲಾಘನೀಯ ಎಂದು ಖ್ಯಾತ ಕಲಾವಿದ ಹಾಗೂ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅಭಿಪ್ರಾಯ ಪಟ್ಟರು.
ರಂಗ ಸ್ವರೂಪ ಕುಂಜತ್ತಬೈಲ್ ಇವರ ವತಿಯಿಂದ ಮರಕಡದ ಸ.ಹಿ. ಪ್ರಾ. ಶಾಲೆಯಲ್ಲಿ ನಡೆದ ರಂಗಸ್ವರೂಪ, "ರಂಗೋತ್ಸವ -2017" ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ರಂಗ ಸ್ವರೂಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಶಿಬಿರಗಳು ವ್ಯಾಪಾರೀಕರಣಗಳ್ಳುತ್ತಿರುವ ಈ ಸನ್ನಿವೇಶದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳನ್ನು ಒಂದೆಡೆ ಸೇರಿಸಿ ಉಚಿತವಾಗಿ ಮಕ್ಕಳಿಗೆ ವೈವಿಧ್ಯಮಯ ಚಟುವಟಿಕೆಗಳನ್ನು ಸಂಘಟಿಸುತ್ತಾ ಬರುತ್ತಿರುವ ರಂಗ ಸ್ವರೂಪದ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. ಇದು ನಿರಂತರವಾಗಿ ಬೆಳೆಯುತ್ತಾ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ "ರಂಗ ಸ್ವರೂಪ ಪ್ರಶಸ್ತಿ 2017"ನ್ನು ಖ್ಯಾತ ಕಲಾವಿದರಾದ ಮೈಮ್ ರಾಮ್‌ದಾಸ್ ರಿಗೆ ನೀಡಿ ಪುರಸ್ಕ್ರರಿಸಲಾಯಿತು. ಸ್ಥಳೀಯ ಸಮಾಜ ಸೇವಕರಾದ ಶರೀಫ್ ಅವರನ್ನು ಈ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ರಾಜೇಶ್ ಮಳಿ, ಕವಿ ಹಾಗೂ ಸಾಹಿತಿ ಬದ್ರುದ್ದೀನ್ ಕೂಳೂರು, ಸ್ಥಳೀಯ ಕಾರ್ಪೋರೇಟರ್ ಕೆ. ಮುಹಮ್ಮದ್ ಮುಖ್ಯ ಅತಿಥಿಗಳಾಗಿದ್ದರು. ರಂಗ ಸ್ವರೂಪದ ಸಲಹೆಗಾರರಾದ ಆದಂ ಖಾನ್, ಗೌರವಾಧ್ಯಕ್ಷರಾದ ಪ್ರೇಂನಾಥ್ ಮರ್ಣಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗ ಸ್ವರೂಪದ ಅಧ್ಯಕ್ಷ ರೆಹಮಾನ್ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು. ರಕ್ಷಿತಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕುಡ್ಲ ಹಾಗೂ ಅನಿಶಾ ಸನ್ಮಾನ ಪತ್ರ ವಾಚನ ಮಾಡಿದರು.
ಬಳಿಕ ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಕಿರಿಯ ಜಾದೂಗಾರರಾದ ಮಳಿ ಸಹೋದರಿಯಿಂದ ಜಾದೂ ಕಾರ್ಯಕ್ರಮ ನಡೆಯಿತು.