×
Ad

ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ನೌಕಾಪಡೆಯ ಮಾಜಿ ಯೋಧ ಕೊಂದಿದ್ದು ಹೇಗೆ....?

Update: 2017-05-01 16:06 IST

ಲಂಡನ್,ಮೇ 1: ಭಯೋತ್ಪಾದಕ ಸಂಘಟನೆ ಅಲ್-ಕಾಯದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿದ್ದು ತಾನೇ ಎಂದು ಹೇಳಿಕೊಂಡಿರುವ ಅಮೆರಿಕದ ನೌಕಾಪಡೆಯ ಮಾಜಿ ಸೀಲ್ ರಾಬರ್ಟ್ ಓ’ನೀಲ್ ಆ ಘಳಿಗೆಯನ್ನು ಹೀಗೆ ಬಣ್ಣಿಸಿದ್ದಾನೆ.

2011,ಮೇ ತಿಂಗಳಲ್ಲಿ ಪಾಕಿಸ್ತಾನದ ಅಬ್ಬತಾಬಾದ್‌ನಲ್ಲಿಯ ಲಾಡೆನ್‌ನ ಅಡಗು ದಾಣದ ಮೇಲೆ ಅಮೆರಿಕದ ನೌಕಾಪಡೆಯ ಸೀಲ್‌ಗಳು ನಡೆಸಿದ್ದ ದಾಳಿಯ ವಿವರಗಳನ್ನು ಓ’ನೀಲ್ ತನ್ನ ‘ದಿ ಆಪರೇಟರ್ ’ಪುಸ್ತಕದಲ್ಲಿ ಮೊದಲ ಬಾರಿಗೆ ಬಹಿರಂಗಗೊಳಿಸಿದ್ದಾನೆ.

ತಾನು ಲಾಡೆನ್‌ನತ್ತ ಎರಡು ಗುಂಡುಗಳನ್ನು ಹಾರಿಸಿದ್ದೆ ಮತ್ತು ಆತನ ತಲೆಬುರುಡೆ ಬಿಚ್ಚಿಕೊಂಡಿತ್ತು ಎಂದು ಓ’ನೀಲ್ ಬರೆದಿದ್ದಾನೆ.

‘‘ನಾನು ಬಲಕ್ಕೆ ತಿರುಗಿ ಅಲ್ಲಿಯೇ ಇದ್ದ ಕೋಣೆಯೊಳಗೆ ಇಣುಕಿದ್ದೆ. ಕೋಣೆಯ ಪ್ರವೇಶದ ಬಳಿಯೇ ಹಾಸಿಗೆಯೊಂದರ ಬಳಿ ಲಾಡೆನ್ ನಿಂತುಕೊಂಡಿದ್ದ. ಆತ ನಾನು ನಿರೀಕ್ಷಿಸಿದ್ದಕ್ಕಿಂತ ಎತ್ತರ ಮತ್ತು ನೀಳಕಾಯ ಹೊಂದಿದ್ದ. ಗಡ್ಡ ಚಿಕ್ಕದಾಗಿತ್ತು ಮತ್ತು ತಲೆಗೂದಲು ಬಿಳಿಯಾಗಿದ್ದವು. ಆತ ತನ್ನೆದುರಿಗಿದ್ದ ಮಹಿಳೆಯೋರ್ವಳ ಭುಜಗಳ ಮೇಲೆ ತನ್ನ ಕೈಗಳನ್ನಿರಿಸಿದ್ದ. ಒಂದು ಸೆಕೆಂಡ್‌ಗೂ ಕಡಿಮೆ ಅವಧಿಯಲ್ಲಿ ಮಹಿಳೆಯ ಭುಜದ ಮೇಲಿನಿಂದ ಬಂದೂಕಿನ ಗುರಿಯನ್ನಿರಿಸಿ ಎರಡು ಬಾರಿ ಟ್ರಿಗರ್ ಎಳೆದಿದ್ದೆ. ಲಾಡೆನ್‌ನ ತಲೆ ಬಿಚ್ಚಿಕೊಂಡು ಆತ ಧೊಪ್ಪನೆ ಕೆಳಕ್ಕೆ ಬಿದ್ದಿದ್ದ. ನಾನು ಇನ್ನೊಂದು ಗುಂಡನ್ನು ಆತನ ತಲೆಯೊಳಗೆ ನುಗ್ಗಿಸಿದ್ದೆ ’’ಎಂದು ಓ’ನೀಲ್ ಪುಸ್ತಕದಲ್ಲಿ ಹೇಳಿದ್ದಾನೆ.

ಗಾಢಾಂಧಕಾರದ ನೆರವು ಪಡೆದು ಸೀಲ್ ತಂಡ ಅಡಗುದಾಣದ ಕಂಪೌಂಡ್‌ನ ಹೊರಗೆ ಇಳಿದಾಗಿನ ಉದ್ವಿಗ್ನ ಕ್ಷಣಗಳನ್ನು ಆತ ನೆನಪಿಸಿಕೊಂಡಿದ್ದಾನೆ. ಸೀಲ್ ಕಮಾಂಡೋಗಳನ್ನು ಹೊತ್ತಿದ್ದ ಹೆಲಿಕಾಪ್ಟರ್‌ಗಳಲ್ಲೊಂದು ಬಲವಂತದ ಭೂಸ್ಪರ್ಶ ಮಾಡಿತ್ತು ಮತ್ತು ಆರಂಭದಲ್ಲಿ ಕಂಪೌಂಡ್‌ನ್ನು ಭೇದಿಸುವಲ್ಲಿ ತಂಡವು ವಿಫಲ ಗೊಂಡಿತ್ತು. ತಂಡವು ಕಾಪ್ಟರ್‌ನಿಂದ ಕೆಳಕ್ಕೆ ಹಾರಿದ್ದ ಕೆಲವೇ ಕ್ಷಣಗಳಲ್ಲಿ ಎದುರಿಗಿದ್ದ ಪ್ರವೇಶ ದ್ವಾರವನ್ನು ಮುರಿದಿತ್ತು. ಅದರ ಹಿಂದೆ ಕಲ್ಲುಗಳಿಂದ ನಿರ್ಮಿಸಲಾಗಿದ್ದ ಭದ್ರವಾದ ಗೋಡೆಯಿತ್ತು. ಆರಂಭದಲ್ಲಿ ಅದನು ್ನಒಡೆಯುವಲ್ಲಿ ತಂಡವು ವಿಫಲಗೊಂಡಿತ್ತಾದರೂ ತೀವ್ರ ಪ್ರಯತ್ನದ ನಂತರ ಯಶಸ್ಸು ಸಾಧಿಸಿತ್ತು.

ಮೂರು ಅಂತಸ್ತುಗಳ ಕಟ್ಟಡವನ್ನು ಪ್ರವೇಶಿಸಿದ್ದ ಕಮಾಂಡೋಗಳು ಎದುರಾಗಿದ್ದ ಎಲ್ಲ ಮಹಿಳೆಯರನ್ನು ಮತ್ತು ಮಕ್ಳಳನ್ನು ಕಟ್ಟಿ ಹಾಕುತ್ತ ಮುಂದಕ್ಕೆ ಹೆಜ್ಜೆಗಳನ್ನಿರಿಸಿದ್ದರು. ಲಾಡೆನ್ ತನ್ನ ನಾಲ್ವರು ಪತ್ನಿಯರು ಮತ್ತು 17 ಮಕ್ಕಳೊಂದಿಗೆ ಅಲ್ಲಿ ವಾಸವಾಗಿದ್ದ ಎನ್ನುವುದು ನಂತರ ಬೆಳಕಿಗೆ ಬಂದಿತ್ತು.

ಒಂದು ಹಂತದಲ್ಲಿ ತಂಡವು ಮನೆಯೊಳಗೆ ಮುಂದುಮುಂದಕ್ಕೆ ಸಾಗುತ್ತಿದ್ದಾಗ ಲಾಡೆನ್‌ನ ಕಿರಿಯ ಪುತ್ರ, 23ರ ಹರೆಯದ ಖಾಲಿದ್ ಎದುರಾಗಿದ್ದ. ಕಮಾಂಡೋಗಳನ್ನು ಕಂಡು ಬಚ್ಚಿಟ್ಟಿಕೊಳ್ಳಲು ಓಡತೊಡಗಿದ್ದ. ಒಳಗೆ ಬಂದವರು ಅಮೆರಿಕದ ಯೋಧರು ಎನ್ನುವುದು ಆತನಿಗೆ ಗೊತ್ತಾಗಿರಲಿಲ್ಲ. ಕಮಾಂಡೋಗಳ ತಂಡದ ನಾಯಕ ಅರೆಬಿಕ್ ಭಾಷೆಯಲ್ಲಿ ‘ಖಾಲಿದ್,ಇಲ್ಲಿ ಬಾ ’ಎಂದು ಪಿಸುಗುಟ್ಟಿದ್ದ. ಖಾಲಿದ್ ಕತ್ತನ್ನು ತಿರುಗಿಸಿ ‘ಏನು ?’ಎಂದು ಕೇಳಿದ್ದ,ಅಷ್ಟೇ. ಅದು ಅವನು ಉಸುರಿದ್ದ ಕೊನೆಯ ಶಬ್ದವಾಗಿತ್ತು. ಕಮಾಂಡರ್‌ನ ಕೈಯಲ್ಲಿದ್ದ ಬಂದೂಕು ಮಾತನಾಡಿತ್ತು. ಖಾಲಿದ್‌ನ ಗಲ್ಲದಿಂದ ಒಳನುಗ್ಗಿದ್ದ ಗುಂಡು ತಲೆಯ ಹಿಂಭಾಗದಿಂದ ಹೊರಬಿದ್ದಿತ್ತು. ಆತ ಅಲ್ಲಿಯೇ ಸತ್ತು ಹೋಗಿದ್ದ ಎಂದು ಓ’ನೀಲ್ ವಿವರಿಸಿದ್ದಾನೆ.

 ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಯೋಧರ ತಳಮಳಗಳನ್ನೂ ಓ’ನೀಲ್ ಬಣ್ಣಿಸಿದ್ದಾನೆ. ಒಂದು ಹಂತದಲ್ಲಿ ಓರ್ವ ಕಮಾಂಡೋ ಮಹಿಳೆಯೋರ್ವಳ ಮೇಲೆ ಗುಂಡು ಹಾರಿಸಿದ್ದ. ‘‘ನಾನು ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸುತ್ತಿದ್ದಾಗ ಅವಳು ದಿಢೀರನೆ ಆತನ ಮಂದೆ ಹಾರಿದ್ದಳು. ಆಕೆಯನ್ನು ಕೊಂದಿದ್ದಕ್ಕೆ ನನಗೇನಾದರೂ ತೊಂದರೆಯಾಗುವುದೇ ’’ಎಂದಾತ ಓ’ನೀಲ್‌ನನ್ನು ಪ್ರಶ್ನಿಸಿದ್ದ.

‘‘ಲಾಡೆನ್‌ನನ್ನು ಕೊಂದ ಬಳಿಕ ನನ್ನ ಮನಸ್ಸು ಓಡುತ್ತಲೇ ಇರಲಿಲ್ಲ. ಕೋಣೆಯೊಳಗೆ ಬಂದ ಸಹ ಕಮಾಂಡೋ,ನೀನು ಈಗಷ್ಟೇ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿದ್ದೀಯಾ ಎಂದು ಹೇಳಿದಾಗಲಷ್ಟೇ ನಾನು ಇಹಲೋಕಕ್ಕೆ ಮರಳಿದ್ದೆ ’’ ಎಂದು ಓ’ನೀಲ್ ಬರೆದುಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News