ಮರವಂತೆ ಸಮೀಪ ಭೀಕರ ರಸ್ತೆ ಅಪಘಾತ: ಓರ್ವ ಮೃತ್ಯು, ಮಕ್ಕಳು ಸಹಿತ 9 ಮಂದಿಗೆ ಗಾಯ
ಬೈಂದೂರು, ಮೇ 1:ಎರಡು ಕಾರುಗಳ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು 9 ಮಂದಿ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಗೋವಾದಿಂದ ಉಡುಪಿ ಕಡೆ ಬರುತ್ತಿದ್ದ ಮಾರುತಿ ಕಾರಿಗೆ ಮಂಗಳೂರಿನಿಂದ ಬೈಂದೂರು ಕಡೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆಯಿತು. ಇದರಿಂದ ಕಾರು ಚಾಲಕ ಬೆಂಗಳೂರು ಎಂ.ಜಿ.ರೋಡ್‌ನ ಧನ ಪಾಂಡ್ಯನ್(36) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟರು.
ಮಾರುತಿ ಕಾರಿನಲ್ಲಿದ್ದ ಮಗು ಕಮಾಲಿ(4), ನಿದರ್ಶನ್(8), ತಾಯಿ ಸರೋಜಾ(65), ಪತ್ನಿ ವಾಸುಕೀ(32), ತಂದೆ ಕಾಮಶಿ(68) ಎಂಬವರು ತೀವ್ರ ವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಿಫ್ಟ್ ಕಾರಿನಲ್ಲಿದ್ದ ಗೋವಾದ ಸುಜಾತಾ(44), ಕೃಷ್ಣ(52) ಸೇರಿದಂತೆ ನಾಲ್ವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ತೀವ್ರತೆಗೆ ಮಾರುತಿ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.