ಸಾಕಲಾಗದ ದನವನ್ನು ಮಾಂಸ ಮಾಡಲು ನಮಗೆ ನೀಡಿದ್ದು ಹಿಂದೂಗಳೇ: ಶಕುಂತಳಾ
ಕುಂದಾಪುರ, ಮೇ 1: ಗೋಮಾಂಸ ಸೇವನೆ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಕೊರಗರ ಮನೆಗೆ ಮಾಜಿ ಶಾಸಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ್ ರೆಡ್ಡಿ ಸೋಮವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಾಮರೆಡ್ಡಿ ಜೊತೆ ಮಾತನಾಡಿದ ದೌರ್ಜನ್ಯಕ್ಕೆ ಒಳಗಾದ ಗ್ರಾಪಂ ಸದಸ್ಯೆ ಶಕುಂತಳಾ, ‘ನಾವು ಹಿಂದಿನಿಂದಲೂ ದನದ ಮಾಂಸವನ್ನು ತಿನ್ನುತ್ತಿದ್ದೆವು. ಮೊನ್ನೆ ನಮ್ಮ ಮೇಲೆ ದಾಳಿ ನಡೆಸಿದ ಯುವಕರ ಮನೆಯವರೇ ಈ ಹಿಂದೆ ಸಾಕಲಾಗದ ಗಂಡು ದನವನ್ನು ನಮಗೆ ನೀಡುತ್ತಿದ್ದರು. ಮೊನ್ನೆಯೂ ನಾವು ಮಾಂಸ ಮಾಡಿದ ದನವನ್ನು ಹಿಂದೂಗಳೇ ನೀಡಿದ್ದಾರೆ. ನಾವು ಎಲ್ಲಿಂದಲೂ ಕದ್ದುತಂದಿಲ್ಲ' ಎಂದರು.
‘ಸತ್ತ ದನವನ್ನು ಹೂಳಲು ನಮ್ಮ ಮನೆಯ ಗಂಡಸರು ಬೇಕು. ಆದರೆ ದನವನ್ನು ನಾವು ತಿನ್ನಬಾರದು ಎನ್ನುತ್ತಿದ್ದಾರೆ. ಮುಸ್ಲಿಮರಿಗೆ ದನ ಕೊಟ್ಟರೆ ತುಂಬಾ ಸಮಸ್ಯೆಗಳಾಗುತ್ತದೆ. ಆದ್ದರಿಂದ ನೀವೇ ತೆಗೆದುಕೊಂಡು ಹೋಗಿ ಎಂದು ಹೇಳಿ ಅನೇಕರು ನಮಗೆ ದನಗಳನ್ನು ನೀಡಿದ್ದಾರೆ’ ಎಂದು ಅವರು ತಿಳಿಸಿದರು.
ಬಳಿಕ ಮಾತನಾಡಿದ ಶ್ರೀರಾಮ ರೆಡ್ಡಿ, ಇಡೀ ದೇಶದಲ್ಲಿ ಇಂದು ಅಲ್ಪ ಸಂಖ್ಯಾತರು, ದಲಿತರ ಮೇಲೆ ದಾಳಿಗಳು ನಡೆಯುತ್ತಿವೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಸಂಘಪರಿವಾರ ಅಲ್ಪಂಖ್ಯಾತರು, ದಲಿತರ ಮೇಲೆ ದಾಳಿ ನಡೆಸುತ್ತಿದೆ. ಇಂತಹ ಪ್ರಕರಣಗಳಿಂದಾಗಿ ಭಾರತ ದೇಶ ತಲೆ ತಗ್ಗಿಸಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಆಹಾರ ಆಯ್ಕೆ ನಮ್ಮ ಹಕ್ಕು. ಅದನ್ನು ಇಂದು ಕಸಿದುಕೊಳ್ಳುತ್ತಿರುವ ಪ್ರಯತ್ನ ನಡೆಯುತ್ತಿದೆ. ಇದು ಆಹಾರದ ಹಕ್ಕಿನ ಮೇಲೆ ದಾಳಿಯಾಗಿದೆ ಎಂದರು.
ಪೊಲೀಸರು ಹಲ್ಲೆಗೊಳಗಾದವರಿಗೆ ರಕ್ಷಣೆ ಕೊಡಬೇಕು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಈವರೆಗೂ ಬಂಧಿಸಿಲ್ಲ. ಇದರಲ್ಲಿ ಆಡಳಿತ ಪಕ್ಷದ ಕೈವಾಡವೂ ಇದೆ. ಆದ್ದರಿಂದ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಕರಣದ ಕುರಿತು ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಹಾಗೂ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ ಅವರೊಂದಿಗೆ ಶ್ರೀರಾಮ್ ರೆಡ್ಡಿ ಮಾತನಾಡಿದರು. ಕುಂದಾಪುರ ಸಿಪಿಎಂ ಮುಖಂಡರಾದ ಕೆ.ಶಂಕರ್, ವೆಂಕಟೇಶ ಕೋಣಿ ಮೊದಲಾದವರು ಉಪಸ್ಥಿತರಿದ್ದರು.