×
Ad

​ಮೇ ದಿನಾಚರಣೆ: ಉಡುಪಿಯಲ್ಲಿ ಕಾರ್ಮಿಕರ ಮೆರವಣಿಗೆ

Update: 2017-05-01 18:33 IST

ಉಡುಪಿ, ಮೇ 1: ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಮೇ ದಿನಾಚರಣೆಯ ಅಂಗವಾಗಿ ಕಾರ್ಮಿಕರ ಮೆರವಣಿಗೆಯನ್ನು ಸೋಮವಾರ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಜೋಡುಕಟ್ಟೆಯಿಂದ ಹೊರಟ ಮೆರವಣಿಗೆ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಸಮಾಪ್ತಿಗೊಂಡಿತು. ಬಳಿಕ ನಡೆದ ಸಾರ್ವ ಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಬಡವ ಮತ್ತು ಶ್ರೀಮಂತರ ನಡುವೆ ಅಂತರ ಉಂಟಾಗಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಜಗತ್ತಿನಾದ್ಯಂತ ಬಲಪಂಥೀಯ ಹಾಗೂ ಪ್ರತಿಗಾಮಿ ಶಕ್ತಿಗಳು ಬಲಗೊಳ್ಳುತ್ತಿವೆ ಎಂದು ಆರೋಪಿಸಿದರು.

ಜನರ ಮಧ್ಯೆ ಭ್ರಮೆಗಳನ್ನು ಸೃಷ್ಟಿಸಿ ಸುಳ್ಳು ಭರವಸೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೋದಿ ಸರಕಾರ ಬಹುರಾಷ್ಟ್ರೀಯ ಕಂಪೆನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಕಾರ್ಮಿಕ ವರ್ಗದ ಮೇಲೆ ತೀವ್ರ ದಾಳಿ ನಡೆಸಲಾಗುತ್ತಿದೆ. ಬಂಡವಾಳಶಾಹಿಗಳಿಗೆ ಒಳ್ಳೆಯ ದಿನವೇ ಹೊರತು ಕಾರ್ಮಿಕರಿಗೆ ಅಲ್ಲ. ನೋಟು ಅಮಾನ್ಯದಿಂದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಬೆಲೆ ಏರಿಕೆಯನ್ನು ಇನ್ನೂ ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಕೆ.ಶಂಕರ್, ಸಿಐಟಿಯುನ ಪಿ. ವಿಶ್ವನಾಥ ರೈ, ಎಐಟಿಯುಸಿನ ಕೆ.ವಿ.ಭಟ್, ವಿಮಾ ನೌಕರರ ಸಂಘದ ಯು. ಗುರುದತ್, ಎಐಬಿಇಎಯ ಹೆರಾಲ್ಡ್ ಡಿಸೋಜ, ಬಿಇಎಫ್‌ಐಯ ರವೀಂದ್ರ, ಬಿಎಸ್‌ಎನ್‌ಎಲ್ ನೌಕರರ ಸಂಘದ ಶಶಿಧರ ಗೊಲ್ಲ, ಮುಖಂಡರಾದ ಬಾಲ ಕೃಷ್ಣ ಶೆಟ್ಟಿ, ಕವಿರಾಜ್, ಉಷಾಲತಾ ಶೆಟ್ಟಿ, ನಳಿನಿ, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News