×
Ad

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 102ನೆ ಆಲಂಕಾರು ಶಾಖೆ ಉದ್ಘಾಟನೆ

Update: 2017-05-01 20:11 IST

ಕಡಬ, ಮೇ 1: ಸಹಕಾರ ಮನೋಭಾವನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿದೆ. ಆರ್ಥಿಕತೆಯನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ನವೋದಯ ಸ್ವಸಹಾಯ ಹುಟ್ಟು ಹಾಕಿ ಬಡವರ ಅಭಿವೃದ್ಧಿ ಮಾಡುತ್ತಿರುವ ಬ್ಯಾಂಕಿನ ಕಾರ್ಯ ಶ್ಲಾಘನೀಯ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಆಲಂಕಾರಿನ ಶ್ರೀ ಲಕ್ಷ್ಮೀ ಟವರ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 102 ನೇ ಶಾಖೆ ಉದ್ಘಾಟಿಸಿದ ಬಳಿಕ ಆಲಂಕಾರಿನ ರಾಣಿ ಮಹಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತರ ಶ್ರೇಯೋಭಿವೃದ್ದಿಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿದೆ. ಉತ್ತಮ ವ್ಯವಹಾರದ ಮೂಲಕ ರಾಜ್ಯದಲ್ಲಿ ಮಾದರಿ ಬ್ಯಾಂಕೆಂದು ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ, ತಾಲೂಕಿನ ಐದು ನವೋದಯ ಸ್ವಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ , ಗ್ರಾಹಕರು ಸಹಕಾರಿ ಕ್ಷೇತ್ರದ ಕಾರ್ಯಚಟುವಟಿಕೆಗಳ ಮೇಲಿನ ನಂಬಿಕೆಯಿಂದ ರಾಜ್ಯದಲ್ಲಿ ಸಹಕಾರಿ ಸಂಘಗಳ ಬೆಳವಣಿಗೆ ಸಾಧ್ಯವಾಗಿದೆ. ಆಲಂಕಾರು ಶಾಖೆ ಕಾರ್ಯಾರಂಭಕ್ಕೂ ಮುನ್ನ ಶಾಖೆಯಲ್ಲಿ ಸುಮಾರು 22 ಕೋಟಿ ಠೇವಣಿ ಸಂಗ್ರಹಗೊಂಡಿರುವುದು ಗ್ರಾಹಕರು ಬ್ಯಾಂಕ್ ಬಗೆಗಿನ ವಿಶ್ವಾಸವನ್ನು ತೋರ್ಪಡಿಸುತ್ತದೆ. ಆಲಂಕಾರು ಭಾಗದಲ್ಲಿನ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಪಡಿತರ ವಿತರಣೆಯಲ್ಲಿನ ಲೋಪವನ್ನು ಸರಿಪಡಿಸಲು ಬ್ಯಾಂಕಿನ ವತಿಯಿಂದ ಶ್ರಮಿಸಲಾಗುವುದು. ಆ ಮೂಲಕ ಸರಕಾರದ ಯೋಜನೆಗಳನ್ನು ಜನರ ಬಳಿ ತಲುಪಿಸಲು ಬ್ಯಾಂಕ್ ಕೈಜೋಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಸ್ ಲೆಸ್ ವ್ಯವಹಾರದ ಆಶಯಕ್ಕೆ ಡಿಸಿಸಿ ಬ್ಯಾಂಕ್ ಸಂಪೂರ್ಣ ಸಹಕಾರ ನೀಡುತ್ತದೆ. ಈ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕಿನಲ್ಲಿನ ಎಟಿಎಂ ಕಾರ್ಡನ್ನು ವಾಣಿಜ್ಯ ಬ್ಯಾಂಕು , ಆರ್ಥಿಕ ವ್ಯವಹಾರದಲ್ಲೂ ಬಳಕೆ ಮಾಡುವಂತೆ ಹೊಸ ತಂತ್ರಜ್ಞಾನ ಅಳವಡಿಸುವ ಚಿಂತನೆ ನಡೆಯುತ್ತಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಭಟ್ ಉಪ್ಪಂಗಳ ಭದ್ರತಾ ಕೋಶ ಉದ್ಘಾಟಿಸಿ ಶುಭಹಾರೈಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ, ತಾಲೂಕು ಪಂಚಾಯಿತಿ ಸದಸ್ಯೆ ತಾರಾ ಕೇಪುಳು, ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಬಾರ್ಕುಳಿ, ಕಟ್ಟಡ ಮಾಲಕ ಹೇಮಂತ್ ರೈ ಮನವಳಿಕೆ ಗುತ್ತು, ಸಹಕಾರ ಸಂಘದ ಉಪನಿಬಂಧಕ ಬಿ ಕೆ ಸಲೀಂ ಮಾತನಾಡಿ ಶುಭಹಾರೈಸಿದರು.

ನಬಾರ್ಡ್ ಅಧಿಕಾರಿ ಇಬ್ರಾಹಿಂ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕೆ.ಎಸ್ .ದೇವರಾಜ್, ಸದಾಶಿವ ಉಳ್ಳಾಲ್, ಎಸ್.ಬಿ. ಜಯರಾಮ ರೈ , ಡಿಸಿಸಿ ಬ್ಯಾಂಕ್ ಆಲಂಕಾರು ಶಾಖಾ ವ್ಯವಸ್ಥಾಪಕಿ ಅಮಿತ ಸಿ ಶೆಟ್ಟಿ ಸೇರಿದಂತೆ ಪುತ್ತೂರು ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಈ ಸಂದರ್ಭ ಶಾಖೆಯ ಪ್ರಥಮ ಸಾಲಗಾರಿಗೆ ಹಾಗೂ ಠೇವಣಿದಾರರಿಗೆ, ಖಾತೆದಾರಿಗೆ ಪತ್ರ ವಿತರಿಸಲಾಯಿತು. ಶಾಖೆ ಆರಂಭಿಸುವ ಸಲುವಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ನವೋದಯ ಸ್ವಸಹಾಯ ಸಂಘದ ಪ್ರೇರಕರನ್ನು ಅಭಿನಂದಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಎಸ್ ವಂದಿಸಿದರು. ಬ್ಯಾಂಕಿನ ವಲಯ ಮೇಲ್ವಿಚಾರಕ ಸಂತೋಷ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News