×
Ad

​ಎಂಸಿಎಸ್ ಬ್ಯಾಂಕ್‌ನಲ್ಲಿ ಪಿಒಎಸ್ ಯಂತ್ರದ ಮೂಲಕ ಪಡಿತರ ವಿತರಣೆ, ಆಧಾರ್ ಸೇವಾ ಕೇಂದ್ರ ಆರಂಭ

Update: 2017-05-01 21:34 IST

ಮೂಡುಬಿದಿರೆ, ಮೇ 1: ಜನಸಾಮಾನ್ಯರಿಗೆ ಆಹಾರ ಸಾಮಗ್ರಿಗಳು ಸರಿಯಾದ ಸಮಯಕ್ಕೆ ಸಮರ್ಪಕವಾಗಿ ತಲುಪಬೇಕು. ಪಿಒಎಸ್ ಅಳವಡಿಸಿದ ಸೊಸೈಟಿಗೆ ಹೆಚ್ಚಿನ ಲಾಭಾಂಶಗಳನ್ನು ಒದಗಿಸಲಿದ್ದೇವೆ. ಎರಡು ದಶಕಗಳಿಂದ ರೇಶನ್ ಕಾರ್ಡ್ ಗೊಂದಲವಿದ್ದು, ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಹೇಳಿದರು.

ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಬ್ಯಾಂಕ್‌ನಲ್ಲಿ ಪಿಒಎಸ್ ಯಂತ್ರದ ಮೂಲಕ ಪಡಿತರ ವಿತರಣೆ, ಪಡಿತರ ಚೀಟಿ ಸೇವಾ ಕೇಂದ್ರ ಹಾಗೂ ಆಧಾರ್ ಕಾರ್ಡ್ ಸೇವಾ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಇಲಾಖೆಗೆ ಆತ್ಮವಿಶ್ವಾಸ ತುಂಬುವಂತಹ ಕೆಲಸ ಇದಾಗಿದೆ ಎಂದ ಅವರು, ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್‌ನಲ್ಲಿ ಈ ಯೋಜನೆಯು ಕಾರ್ಯಗತವಾಗಿರುವುದು ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಪ್ರಶಂಸಿಸಿದರು.

ಆಧಾರ್ ಕಾರ್ಡ್ ಸೇವಾ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಕೆ. ಅಯಚಂದ್ರ ಜೈನ್ ಮಾತನಾಡಿ, ಅತೀ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಎಂಸಿಎಸ್ ಬ್ಯಾಂಕ್‌ನಲ್ಲಿ ಈ ಸೇವಾ ಕೇಂದ್ರವನ್ನು ತೆರೆದಿರುವುದು ಶ್ಲಾಘನೀಯ. ಪಡಿತರ ಚೀಟಿ, ಆಧಾರ್ ತಿದ್ದುಪಡಿಯೂ ಇಲ್ಲಿಯೇ ಆಗುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿಯೂ ಈ ಸೇವಾ ಕೇಂದ್ರವನ್ನು ತೆರೆಯಲಾಗುವುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬ್ಯಾಂಕ್‌ನ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ಅನ್ನಭಾಗ್ಯ ಯೋಜನೆಯನ್ನು ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು. ಪಡಿತರ ಅಕ್ಕಿಯನ್ನು ಚಿಲ್ಲರೆ ಮಾರಾಟ ಮಾಡುವುದರಿಂದ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭ ಆಹಾರ ಇಲಾಖೆಯಲ್ಲಿ ಅಧಿಕಾರಿಯಾಗಿ 30 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ವಾಸು ಶೆಟ್ಟಿ ಅವರನ್ನು ಬ್ಯಾಂಕ್‌ನ ವತಿಯಿಂದ ಸನ್ಮಾನಿಸಲಾಯಿತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಎ.ಟಿ. ಜಯಪ್ಪ, ಮೂಡಾದ ಅಧ್ಯಕ್ಷ ಸುರೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಬಾಹುಬಲಿ ಪ್ರಸಾದ್ ವಂದಿಸಿದರು. ವಿನಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News