ಕಾರ್ಮಿಕ ಹಕ್ಕುಗಳಿಗೆ ಧ್ವನಿಯಾಗೋಣ: ಐವನ್ ಡಿಸೋಜ
ಮಂಗಳೂರು, ಮೇ 1: ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ನಾವು ಧ್ವನಿಯಾಗಬೇಕೆಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಮಂಗಳೂರು ನಗರ ಬೀದಿಬದಿ ವ್ಯಾಪಾರಸ್ಥರ ಸಂಘ ಮತ್ತು ತಲೆ ಹೊರೆ ಕಾರ್ಮಿಕರ ಸಂಘದ ಸಹಯೋಗದಲ್ಲಿ ಮಿನಿವಿಧಾನಸೌಧ ಬಳಿಯ ಕರಾವಳಿ ಸಭಾಭವನದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಮತ್ತು ಆರು ಮಂದಿ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಮತ್ತು ಅವರನ್ನು ಶೋಷಣೆಗೊಳಪಡಿಸಿ ದಮನಿಸುವ ಕಾರ್ಯದ ವಿರುದ್ಧ ಎಲ್ಲರೂ ಧ್ವನಿ ಎತ್ತುವಂತಾಗಬೇಕು. ನಾನು ಕೂಡ ಕಾರ್ಮಿಕರ ಧ್ವನಿಯಾಗಿದ್ದೇನೆ. ಅವರ ಪರವಾಗಿ ವಿಧಾನಪರಿಷತ್‌ನಲ್ಲಿ ಮಾತನಾಡಿದ್ದೇನೆ ಎಂದರು.
ಈ ಸಂದರ್ಭ ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಸಲಾಂ ಎಮ್ಮೆಕೆರೆ, ಮಂಗಳೂರು ನಗರ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಹಿರಿಯ ಕಾರ್ಮಿಕ ನಿರೀಕ್ಷಕಿ ಮೇರಿ ಡಯಾಸ್, ಕಾರ್ಪೊರೇಟರ್ ದಿನೇಶ್ ಪಿ.ಎಸ್., ಮಾಜಿ ಕಾರ್ಪೊರೇಟರ್ ಭಾಸ್ಕರ ರಾವ್, ಸರಿತಾ, ದಯಾನಂದ ಸಾಲ್ಯಾನ್, ಮುಹಮ್ಮದ್ ಹನೀಫ್, ಹಕೀಂ ವಾಮಂಜೂರು, ಖಾದರ್, ಹಸನ್ ಕುದ್ರೋಳಿ ಮೊದಲಾದವರು ಉಪಸ್ಥಿತರಿದ್ದರು.