×
Ad

ಬಂದರು ಹಮಾಲಿ ಕಾರ್ಮಿಕರಿಂದ ಮೇ ದಿನಾಚರಣೆ

Update: 2017-05-01 21:51 IST

ಮಂಗಳೂರು, ಮೇ 1: ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಟು ಗಂಟೆಗಳ ಕೆಲಸ, ನಿದ್ದೆ, ಮನರಂಜನೆಗಾಗಿ 1886ರ ಮೇ 1ರಂದು ಅಮೇರಿಕಾದ ಚಿಕಾಗೋ ನಗರದ ಕಾರ್ಮಿಕರು ಹುತಾತ್ಮರಾಗಿ ಹೊತ್ತಿಸಿದ ಕ್ರಾಂತಿಯ ಕಿಡಿಯು ಜಗತ್ತನಾದ್ಯಂತ ಹಬ್ಬಿರುವ ಪರಿಣಾಮವಾಗಿ ಕಾರ್ಮಿಕರಿಗೆ ಕೆಲವಾದರೂ ಹಕ್ಕುಗಳು ಸಿಗುತ್ತಿವೆ. ದೇಶದ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸರಕಾರಗಳು ಕಾರ್ಪೋರೇಟ್ ಕಂಪೆನಿಗಳ ಅಡಿಯಾಳಾಗುತ್ತಿದೆ, ಕಾರ್ಮಿಕರ ಪರವಾಗಿರುವ ಕಾಯ್ದೆ, ಕಾನೂನುಗಳ ರಕ್ಷಣೆಗಾಗಿ ಕಾರ್ಮಿಕರು ಐಕ್ಯ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಕಾರ್ಮಿಕರು ಇಡೀ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗಲು ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭ ಬಂದರು ಹಮಾಲಿ ಕಾರ್ಮಿಕರಿಗೆ ಎಪಿಎಂಸಿ ಕಾನೂನುಗಳಡಿಯಲ್ಲಿ ಸಿಗುತ್ತಿರುವ ಸವಲತ್ತುಗಳನ್ನು ಪಡೆಯಲು ಅನಾನುಕೂಲತೆಯ ಬಗ್ಗೆ ಸಂಘದ ಪ್ರಮುಖರು ಶಾಸಕರ ಗಮನಕ್ಕೆ ತಂದಾಗ ಸ್ಥಳದಲ್ಲೇ ತ್ರಿಪಕ್ಷೀಯ ಮಾತುಕತೆಗೆ ದಿನ ನಿಗದಿಪಡಿಸಿ ಕಾರ್ಮಿಕರ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿದರು. ನಂತರ ಕಾರ್ಮಿಕರ ಕಟ್ಟೆಯನ್ನು ಉದ್ಘಾಟಿಸಿದರು.

ನಗರಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಸಿಐಟಿಯು ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಜಿಲ್ಲಾ ಫುಟ್ಬಾಲ್ ಎಸೋಸಿಯೇಶನ್ ಅಧ್ಯಕ್ಷರಾದ ಡಿ.ಎಂ ಅಸ್ಲಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್ ಅಧ್ಯಕ್ಷತೆ ವಹಿಸಿದ್ದರು. 

ಹಳೆ ಬಂದರು ಬಳಕೆದಾರರ ಸಂಘದ ಅಧ್ಯಕ್ಷ ಲತೀಫ್ ಬೆಂಗರೆ, ಡಿವೈಎಫ್ ಐ ಮುಖಂಡ ಎ.ಬಿ ನೌಷಾದ್, ಮುಹಮದ್ ಮೀನು, ಅಹಮದ್ ಬಾವ, ಮುಹಮದ್ ಶಾಲಿ ಬಜಪೆ, ಬಿ.ಕೆ ಮನ್ಸೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಮಿಕರ ಕಟ್ಟೆ ರಚನೆ ಮಾಡಿ, ಅದಕ್ಕೆ ಇಂಟರ್ ಲಾಕ್ ಅಳವಡಿಸಲು ಅನುದಾನ ಒದಗಿಸಿಕೊಟ್ಟ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕರನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್ ಸ್ವಾಗತಿಸಿದರು.ಹಂಝ ಕಿನ್ಯ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಬಜಾಲ್ ಕಾರ್ಮಿಕರಿಗೆ ವಿವಿಧ ಮನರಂಜನೆ ಆಟಗಳನ್ನು ನಡೆಸಿಕೊಟ್ಟರು. ಸಂಘದ ಕೋಶಾಧಿಕಾರಿ ಹರೀಶ್ ಕೆರೆಬೈಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News