ಸರಕಾರ ಅಲ್ಪಸಂಖ್ಯಾತರಿಗೆ ನೀಡಿದ ಸಲವತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ: ಎಂ.ಎ.ಗಫೂರ್ ಕರೆ
ವಿಟ್ಲ, ಮೇ 1: ಮಾನವ ಸಮುದಾಯದ ಸೇವೆ ಮಾಡುವುದನ್ನು ಪವಿತ್ರ ಇಸ್ಲಾಂ ಕಲಿಸಿಕೊಟ್ಟಿದೆ. ಪವಿತ್ರ ಕುರ್‌ಆನ್ ಪ್ರಮುಖ ಸ್ಥಳಗಳಲ್ಲಿ ಮಾನವ ಜನಾಂಗದ ಹೆಸರೆತ್ತಿ ಪ್ರಸ್ತಾಪ ಮಾಡಿದೆಯೇ ಹೊರತು ಎಲ್ಲಿಯೂ ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿಲ್ಲ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಸಂಘ-ಸಂಸ್ಥೆಗಳು ತನ್ನ ಸಮುದಾಯದ ಅಭಿವೃದ್ಧಿಗೋಸ್ಕರ ಶ್ರಮಿಸುವುದರ ಜೊತೆಗೆ ಜಾತ್ಯಾತೀತ ಭಾರತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ. ಗಪೂರ್ ಹೇಳಿದರು.
ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ವಲಿಯುಲ್ಲಾಹಿ ಅವರ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಸಾಕಷ್ಟು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದಕ್ಕಾಗಿ ಕೋಟ್ಯಂತರ ರೂ. ಅನುದಾನವನ್ನು ಬಜೆಟ್‌ನಲ್ಲಿ ಮೀಸರಿಸಿದೆ. ಇದನ್ನು ಸಮುದಾಯ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮೂಡಿಗೆರೆ ಖಾಝಿ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಶೈಖುನಾ ಎಂ.ಎ. ಕಾಸಿಂ ಮುಸ್ಲಿಯಾರ್ ಉದ್ಘಾಟಿಸಿದರು. ಸಯ್ಯಿದ್ ಕೆ.ಎಸ್. ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿ ದುಆಶೀರ್ವಚನಗೈದರು. ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಕ್ ಫೈಝಿ ಮುಖ್ಯ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಉದ್ಯಮಿ ನೌಶಾದ್ ಹಾಜಿ ಸೂರಲ್ಪಾಡಿ, ಕಲ್ಲಡ್ಕ ದಾರುಲ್ ಉಲೂಂ ಎಜ್ಯುಕೇಶನ್ ಅಕಾಡಮಿ ಅಧ್ಯಕ್ಷ ಹಾಜಿ ಜಿ. ಸುಲೈಮಾನ್ ಮೊದಲಾದವರು ಭಾಗವಹಿಸಿದ್ದರು.
ಅಮೆಮಾರು ಜುಮಾ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ, ಅಕ್ಕರಂಗಡಿ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ, ಉಪಾಧ್ಯಕ್ಷ ಎಂ.ಎ. ಬಶೀರುದ್ದೀನ್ ಅನ್ವರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಿ.ಜೆ., ಮಾಜಿ ಅಧ್ಯಕ್ಷ ಪಿ.ಜೆ. ಯೂಸುಫ್ ಹಾಜಿ, ಕೋಶಾಧಿಕಾರಿ ಇಸಾಕ್ ಪ್ಯಾಶನ್‌ವೇರ್, ಇಕ್ಬಾಲ್ ಪಿ.ಎಂ. ಅಕ್ಕರಂಗಡಿ, ಬಾವಾ ನೆಹರುನಗರ, ಸಿ.ಪಿ. ಆದಂ ಹಾಜಿ, ತಸ್ಲೀಂ ಆರಿಫ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕುರ್‌ಆನ್ ಹಾಫಿಳ್ ಬಿರುದು ಪಡೆದ ವಿದ್ಯಾರ್ಥಿ ಸುಹೈಲ್ ಅಬ್ದುಲ್ ಖಾದರ್ ಬಿನ್ ಉಸ್ಮಾನ್ ಅಕ್ಕರಂಗಡಿ ಅವರನ್ನು ಗಣ್ಯರು ಸನ್ಮಾನಿಸಿದರು.
ಅಕ್ಕರಂಗಡಿ ಮಸೀದಿ ಮುದರ್ರಿಸ್ ಕೆ.ಎಸ್. ಇಸ್ಮಾಯಿಲ್ ದಾರಿಮಿ ಸ್ವಾಗತಿಸಿದರು. ಸಿನಾನ್ ಖಲಂದರಿಯ ವಂದಿಸಿ, ಉಮ್ಮರ್ ಪಾರೂಕ್ ನೆಹರುನಗರ ಕಿರಾಅತ್ ಪಠಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಹಾಗೂ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಈ ಪ್ರಯುಕ್ತ ನಡೆದ ಮೂರು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅಬೂ ಝಿಹಾನ್ ಝುಬೈರ್ ಅಝ್ಹರಿ ಪಳ್ಳಗೋಡು, ತೊಟ್ಟಿ-ಕೇರಳ, ನೌಶಾದ್ ನಿರಝಾಮಿ ಕೇರಳ, ಅಬ್ದುಲ್ ಅಝೀರ್ ಅಶ್ರಫಿ ಪಾಣತ್ತೂರು ಧಾರ್ಮಿಕ ಉಪನ್ಯಾಸಗೈದರು.