ಕಾರ್ಮಿಕ ವರ್ಗದ ಕಾನೂನುಗಳನ್ನು ಮಾಲಕರ ಪರವಾಗಿ ಬದಲಾಯಿಸುತ್ತಿರುವ ಕೇಂದ್ರ ಸರಕಾರ: ಎಸ್. ವರಲಕ್ಷ್ಮೀ
ಬೆಳ್ತಂಗಡಿ, ಮೇ 2: ಕಾರ್ಮಿಕ ವರ್ಗದ ಕಾನೂನುಗಳನ್ನು ಮಾಲಕರ ಪರವಾಗಿ ಬದಲಾಯಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಕಾರ್ಮಿಕರ ವಿಚಾರದಲ್ಲಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸಿದ್ದಾರೆ. ಇದರಿಂದಾಗಿ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ ಎಂದು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ, ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಹೇಳಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ಇರುವ ಮೈದಾನದಲ್ಲಿ ಬೆಳ್ತಂಗಡಿಯ ಸಿಐಟಿಯು ತಾಲೂಕು ಸಮಿತಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂರು ವರ್ಷಗಳ ಕೇಂದ್ರ ಸರಕಾರದ ಆಡಳಿತದಿಂದಾಗಿ ದೇಶದಲ್ಲಿ ಅಸಮಾನತೆ ವಿಜೃಂಭಿಸುತ್ತಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದ್ದು, ಇದು ಗುಜರಾತ್ ಮಾದರಿಯೇ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ 80ರಷ್ಟಿದ್ದ ಕೋಟ್ಯಾಧೀಶರ ಸಂಖ್ಯೆ ಇದೀಗ 134ಕ್ಕೆ ಏರಿದೆ. ಕೇಂದ್ರ ಸರಕಾರ ಮೂರು ವರ್ಷಗಳಲ್ಲಿ 54 ಮಂದಿ ಕೋಟ್ಯಾಧೀಶರನ್ನು ಉತ್ಪಾದಿಸಿದ ಮಹಾನ್ ಸಾಧನೆ ಮಾಡಿದೆ. ದೇಶಾದ್ಯಂತ ಗರ್ಭಿಣಿ, ಬಾಣಂತಿಯರಲ್ಲಿ ಅಪೌಷ್ಟಿಕತೆಯ ಕೊರತೆಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದ್ದು ಕೇಂದ್ರ ಸರಕಾರದ "ಬೇಟಿ ಬಚಾವ್" ಯೋಜನೆ ಅಂದರೆ ಇದೇನಾ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿಯ ಅಕ್ಷರ ದಾಸೋಹ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಟ್ಟು ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಮೇ 25ರಂದು ರಾಜ್ಯಾದ್ಯಾಂತ ಜಿಪಂ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ಸಮಾಜ ಪರಿವರ್ತನ ಚಳವಳಿಯ ನಾಯಕ ಪಿ. ಡೀಕಯ್ಯ ಮಾತನಾಡಿ, ಕಾರ್ಮಿಕ ವರ್ಗ ಒಂದಾಗುವ ಮೂಲಕ ಮಾರ್ಕ್ಸ್, ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಯ ಹೊಸ ಸಮಾಜದ ನಿರ್ಮಾಣಕ್ಕೆ ದುಡಿಯಬೇಕು. ಈ ಚಿಂತನೆಯಿಂದ ಮಾತ್ರ ಶೋಷಣೆ ಮುಕ್ತ ಸಮಾಜದ ನಿರ್ಮಾಣ ಸಾಧ್ಯ. ಕಾರ್ಮಿಕರು ಸಂಘಟಿತರಾಗದಂತೆ ಜಾತಿ, ಧರ್ಮ, ದೇವರ ಹೆಸರಲ್ಲಿ ಷಡ್ಯಂತ್ರ ರೂಪಿಸುತ್ತಿದ್ದು ಈ ಬಗ್ಗೆ ಜಾಗೃತಿಗೊಳ್ಳಬೇಕಾದ ಅಗತ್ಯ ಇದೆ ಎಂದರು.
ಸಿಐಟಿಯು ತಾಲೂಕು ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಹರಿದಾಸ್, ಬೆಳ್ತಂಗಡಿ ತಾಲೂಕು ಬೀಡಿ ಕೆಲಗಾರ ಸಂಘದ ಅಧ್ಯಕ್ಷ ಜಯರಾಮ ಮಯ್ಯ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕ ಸಂಘದ ಅನಿಲ್ ಎಂ., ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ, ಪುತ್ತೂರು ಬೀಡಿ ಕೆಲಸಗಾರರ ಸಂಘದ ಕಾರ್ಯದರ್ಶಿ ಯಶೋಧಾ ಎಸ್., ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸುಕನ್ಯಾ ಉಪಸ್ಥಿತರಿದ್ದರು.
ಇದೇ ಸಂದರ್ದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಜಾನಕಿ ನಿಟ್ಟಡೆ ಅವರನ್ನು ಗೌರವಿಸಲಾಯಿತು. ಸಿಐಟಿಯು ಕಾರ್ಯದರ್ಶಿ ವಸಂತ ನಡ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶೇಖರ್ ಲಾಯಿಲ ಕಾರ್ಯಕ್ರಮ ನಿರ್ವಹಿಸಿದರು. ವೇಣೂರು ಪ್ರದೇಶ ಬೀಡಿ ಕೆಲಸಗಾರ ಸಂಘದ ಕಾರ್ಯದರ್ಶಿ ರೋಹಿಣಿ ಪೆರಾಡಿ ವಂದಿಸಿದರು.