×
Ad

ಬಿಜೆಪಿಯಿಂದ ರಾಜಕೀಯ ಉದ್ದೇಶಕ್ಕಾಗಿ ಹಿಂದುತ್ವದ ಹೈಜಾಕ್: ಆರೆಸ್ಸೆಸ್‌ ಮಾಜಿ ಪ್ರಚಾರಕ ಎನ್. ಹನುಮೇಗೌಡ

Update: 2017-05-02 16:33 IST

ಮೂಡುಬಿದಿರೆ, ಮೇ.1: ಕೆಲವು ರಾಜಕೀಯ ಪಕ್ಷಗಳು ಹಿಂದುತ್ವವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿವೆ. ಬಿಜೆಪಿ ಹಿಂದುತ್ವವನ್ನು ತನ್ನ ಸ್ವಂತ ಆಸ್ತಿಯೆಂಬಂತೆ ಹೈಜಾಕ್ ಮಾಡಿಕೊಂಡಿದೆ. ಧರ್ಮವೆಂಬುದು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಬಾರದು. ಆರೆಸ್ಸೆಸ್‌ನ ನೈಜ ತತ್ವಾದರ್ಶಗಳನ್ನು ಉಳಿಸಿಕೊಳ್ಳುವಲ್ಲಿ ಸಂಘಟನೆಯ ಹಿರಿಯ ನಾಯಕರು ವೈಫಲ್ಯ ಕಂಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಆರೆಸ್ಸೆಸ್ಸ್ ನಾಯಕರು ವಿಧಾನಸೌಧದ ಮೊಗಸಾಲೆಯಲ್ಲಿ ಠಿಕಾಣಿ ಹೂಡಿದ್ದರು. ಸರ್ವಸಂಗ ಪರಿತ್ಯಾಗಿಗಳಾದ ಸಂಘದ ನಾಯಕರು ಹಣ ಹಾಗೂ ಅಧಿಕಾರದ ಮೋಹಪಾಶಕ್ಕೆ ಸಿಲುಕಿದರು ಎಂದು ಆರೆಸ್ಸೆಸ್‌ನ ಮಾಜಿ ಪ್ರಚಾರಕ ಹಾಗೂ ಬಿಜೆಪಿ ಹಿರಿಯರ ವೇದಿಕೆಯ ರಾಜ್ಯ ಕಾರ್ಯದರ್ಶಿ ಎನ್. ಹನುಮೇಗೌಡ ಹೇಳಿದರು.

ಪಣಪಿಲ ಗ್ರಾಮದ ನಂದೊಟ್ಟು ಜಯ-ವಿಜಯ ಕಂಬಳ ಕ್ರೀಡಾಂಗಣದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.

ಸಂಘದ ಸ್ಥಾಪನೆಯ ಉದ್ದೇಶ ದೇಶದ ಮನೆಗಳಲ್ಲಿ ಸಂಸ್ಕೃತಿಯನ್ನು ಉಳಿಸಬೇಕು ಮತ್ತು ಆ ಉದ್ದೇಶ ಈಡೇರಿದ ತಕ್ಷಣ ಸಂಘದ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬುದಾಗಿತ್ತು. ಆದರೆ ದುರ್ದೈವವಶಾತ್ ಇಂದು ಬಿಜೆಪಿಗೆ ಸಂಘ ಬೆಂಬಲವಾಗಿ ನಿಂತಿದೆ. ಸ್ಥಾಪನೆಯ ಉದ್ದೇಶ ಮರೆಮಾಚಿರುವ ನಾಯಕರು ವ್ಯವಸ್ಥಿತವಾಗಿ ಅಧಿಕಾರದ ಉದ್ದೇಶಕ್ಕಾಗಿ ಸಂಘದ ಕಾರ್ಯಚಟುವಟಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ತನ್ನ ಓಟ್‌ಬ್ಯಾಂಕ್ ಅನ್ನು ಸ್ಥಿರಗೊಳಿಸುವ ಒಂದೇ ಉದ್ದೇಶದಿಂದ ಬಿಜೆಪಿ ಕರಾವಳಿಯಲ್ಲಿ ಹಿಂದೂ ಸಮಾವೇಶಗಳನ್ನು ಆಯೋಜಿಸುತ್ತಿದೆ. ಹಿಂದೂ ಸಮಾವೇಶವು ರಾಜಕೀಯ ಅರ್ಥವನ್ನು ಕಳೆದುಕೊಂಡು ಸಮುದಾಯವನ್ನು ಒಗ್ಗಟ್ಟಾಗಿಸುವ ಏಕಕಾರಣಕ್ಕಾಗಿ ಬಳಕೆಯಾಗಬೇಕು ಎಂದರು.

ಮೋದಿ ಅಲೆಯಿಂದ ಎಲ್ಲ ಕಡೆಗಳಲ್ಲಿ ಬಿಜೆಪಿ ಗೆಲ್ಲುತ್ತಿದೆ ಎಂದಾದಲ್ಲಿ ಸಂಘದ ಕಾರ್ಯಕರ್ತರನ್ನು ಅಮಾನುಷವಾಗಿ ಥಳಿಸಿರುವ ವ್ಯಕ್ತಿಗಳನ್ನೇ ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನಾಗಿಸಿದ್ದು ಏಕೆ?, ಗೆಲ್ಲುವ ಒಂದೇ ಉದ್ದೇಶಕ್ಕಾಗಿ ನೈತಿಕತೆಯನ್ನು ಕಳೆದವರಂತೆ ವರ್ತಿಸುತ್ತಿರುವ ಬಿಜೆಪಿ ನಾಯಕರ ಜೊತೆ ಆರೆಸ್ಸೆಸ್ ನಾಯಕರ ಮೈತ್ರಿಯೇ ಅನಾಹುತಕಾರಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಎಲ್ಲ ಧರ್ಮದಲ್ಲಿ ಒಳ್ಳೆಯದನ್ನೇ ಕಲಿಸಿಕೊಡಲಾಗುತ್ತದೆ. ಅಹಿಂಸೆಯನ್ನು ಬೋಧಿಸಲಾಗುತ್ತಿದೆ. ಕೋಮುಗಲಭೆಗಳಿಂದ ಬಿಜೆಪಿ ಸಾಕಷ್ಟು ಲಾಭ ಪಡೆಯುತ್ತಿವೆ. ಅಮಾಯಕರು ಸತ್ತರೆ ಅವರ ಶವದ ಮೇಲೆ ಬಿಜೆಪಿ ಮತ್ತದರ ಸಂಘಟನೆಗಳು ಲಾಭ ಮಾಡುವ ನೀಚ ಪರಿಪಾಠ ಬೆಳೆದುನಿಂತಿದೆ ಎಂದರು.

ಎಚ್.ಐ. ಅಬೂಸುಫ್ಯಾನ್ ಮದನಿ, ಕನ್ಯಾನ ಶ್ರೀ ಸದ್ಗುರು ಶಶಿಕಾಂತ ಮಣಿ ಸ್ವಾಮೀಜಿ, ಶಾಸಕ ಅಭಯಚಂದ್ರ ಜೈನ್, ಸಂಪತ್ ಸಾಮ್ರಾಜ್ಯ, ರುಕ್ಕಯ್ಯ ಪೂಜಾರಿ, ಸುಭಾಸ್‌ಚಂದ್ರ ಚೌಟ, ವಲೇರಿಯನ್ ಸಿಕ್ವೇರಾ, ಗಣಪತಿ, ಸುದತ್ತ ಜೈನ್, ಶಿವಾನಂದ ಎಸ್. ಪಾಂಡ್ರು ಉಪಸ್ಥಿತರಿದ್ದರು.

ನಿತೇಶ್ ಮಾರ್ನಾಡ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News