×
Ad

ಕಾಂಗ್ರೆಸ್ ಸೇರಲು ಬಿಜೆಪಿ ನಾಯಕರ ಒಲವು: ಡಾ.ಜಿ.ಪರಮೇಶ್ವರ್

Update: 2017-05-02 17:21 IST

ಮಂಗಳೂರು, ಮೇ 2: 2018ರ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜಾಗುತ್ತಿದ್ದು, ಪಕ್ಷವನ್ನು ಬಲಪಡಿಸಲು ತಾನು ಈ ಪ್ರವಾಸ ಕೈಗೊಂಡಿದ್ದೇನೆ. ಪಕ್ಷದ ಸಾಂಸ್ಥಿಕ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದ್ದು, ಈ ಬಾರಿಯ ಎಐಸಿಸಿ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ. ಬಿಜೆಪಿಯ ಅನೇಕ ನಾಯಕರು ಪಕ್ಷ ಸೇರಲು ಒಲವು ತೋರಿದ್ದು, ಅಂತಹವರ ಪಟ್ಟಿ ಸಿದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ  ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪಕ್ಷದಲ್ಲಿ 124 ಮಂದಿ ಹಾಲಿ ಶಾಸಕರಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿತನ ಮುಂದುವರಿಸುವ ಅಥವಾ ಬದಲಿಸುವ ಕುರಿತಂತೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಈಗಾಗಲೇ ಪಕ್ಷದಿಂದ ವೀಕ್ಷಕರನ್ನು ನೇಮಕಗೊಳಿಸಲಾಗಿದೆ. ಅವರು ಮಾಹಿತಿ ಸಂಗ್ರಹಿಸಿ ಹೈಕಮಾಂಡ್‌ಗೆ ಒದಗಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿಯ ಒಳಜಗಳ ಪಕ್ಷದ ಆಂತರಿಕ ವಿಚಾರ. ನಮ್ಮ ಪಕ್ಷ ಐದು ವರ್ಷವನ್ನು ಯಶಸ್ವಿಯಾಗಿ ಮುಗಿಸಿ ಚುನಾವಣೆ ಎದುರಿಸಲಿದೆ. ಐದು ವರ್ಷಗಳಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷ ಮಾಡಲಿದೆ ಎಂದು ಅವರು ಹೇಳಿದರು.

2018ರ ಚುನಾವಣಾ ತಯಾರಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ರೂಪುರೇಷೆಗಳನ್ನು ತಯಾರು ಮಾಡಿಕೊಂಡಿದ್ದು, ಆ ಬಗ್ಗೆ ಜಿಲ್ಲಾ ಮಟ್ಟದ ಮುಖಂಡರು, ಕಾರ್ಯಕರ್ತರ ಜತೆ ಚರ್ಚಿಸುವ ನಿಟ್ಟಿನಲ್ಲಿ ಹಾಗೂ ಚಿಕ್ಕಮಗಳೂರು- ಉಡುಪಿ- ಕಾರವಾರ- ದ.ಕ. ಜಿಲ್ಲಾ ವ್ಯಾಪ್ತಿಯ ಮಂಗಳೂರು ರೇಂಜ್‌ನ ಪರಿಶೀಲನೆಗೆ ಮಂಗಳೂರಿಗೆ ಭೇಟಿ ನೀಡಿದ್ದೇನೆ. ಜಿಲ್ಲೆಯಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆಗೆ ಸದಸ್ಯತ್ವ ಅಭಿಯಾನ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಎರಡು ಬಾರಿ ಪಕ್ಷದಿಂದ ಅಭಿಯಾನವನ್ನು ಮುಂದೂಡಲಾಗಿದ್ದು, ಮೇ 15ಕ್ಕೆ ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ನಾಯಕರಾದ ಬಿ.ಎಚ್. ಖಾದರ್, ಎಂ.ಎ. ಗಫೂರ್, ಕಣಚೂರು ಮೋನು, ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.

ಜೆಡಿಎಸ್- ಬಿಜೆಪಿಯಿಂದ ಕಾಂಗ್ರೆಸ್ ಸೇರುವವರ ಪಟ್ಟಿ!: ಜೆಡಿಎಸ್‌ನಿಂದ ಹಾಗೂ ಬಿಜೆಪಿಯಿಂದಲೂ ಹಲವರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ಈಗಾಗಲೇ ಈ ಬಗ್ಗೆ ಪಟ್ಟಿ ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಗೃಹ ಸಚಿವ ಡಾ. ಪರಮೇಶ್ವರ್ ಉತ್ತರಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಮುಂದಿನ ಅವಧಿಗೆ ತಾವು ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ತಾವು ಬದ್ಧ ಎಂದಷ್ಟೇ ಪ್ರತಿಕ್ರಿಯಿಸಿದರು.

ಹೊರೆ ಜಾಸ್ತಿ ಅನ್ನಿಸಿದ್ದರೆ ಇಳಿಸುತ್ತಿದ್ದೆ!
ಮೂರು ಹುದ್ದೆಗಳನ್ನು ನಿಭಾಯಿಸಲು ತಮಗೆ ತೊಂದರೆಯಾಗುತ್ತಿಲ್ಲವೇ ಎಂಬ ಪ್ರಶ್ನೆಗೆ, ನನಗೆ ನೀಡಿರುವ ಹುದ್ದೆಗಳನ್ನು ನಿಭಾಯಿಸಲು ಸಮರ್ಥನಿದ್ದೇನೆ ಎಂದು ತಿಳಿದುಕೊಂಡಿರುವುದರಿಂದ ಆ ಹೊರೆಯನ್ನು ಹೊತ್ತುಕೊಂಡಿದ್ದೇನೆ. ಹೊರೆ ಅನ್ನಿಸಿದ್ದರೆ ಯಾವತ್ತೇ ಇಳಿಸಿಬಿಡುತ್ತಿದ್ದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News