×
Ad

ಜಲೀಲ್ ಹಂತಕರ ವಿರುದ್ಧ ಕಠಿಣ ಕ್ರಮ: ಕರೋಪಾಡಿ ಮನೆಗೆ ಭೇಟಿ ವೇಳೆ ಗೃಹಸಚಿವ ಪರಮೇಶ್ವರ್ ಭರವಸೆ

Update: 2017-05-02 17:44 IST

ಬಂಟ್ವಾಳ, ಮೇ 2: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಹಾಗೂ ಅವರ ಕುಟುಂಬಕ್ಕೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್ ಭರವಸೆ ನೀಡಿದರು.

ಕರೋಪಾಡಿಯ ಸಮ್ಮಡ್ಕದಲ್ಲಿರುವ ಜಲೀಲ್ ಮನೆಗೆ ಭೇಟಿ ನೀಡಿದ ಅವರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಹೊರಡಲು ಸಿದ್ಧರಾದ ಸಚಿವ ಪರಮೇಶ್ವರ್‌ರೊಂದಿಗೆ ಪತ್ರಕರ್ತರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರಾದರೂ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಜಲೀಲ್ ಹತ್ಯೆ ಪ್ರಕರಣದ ಸಮಗ್ರ ಮಾಹಿತಿಗಳನ್ನು ಪೊಲೀಸ್ ಅಧಿಕಾರಿಗಳಿಂದ ಹಾಗೂ ಪಕ್ಷದ ನಾಯಕರಿಂದ ಪಡೆದುಕೊಂಡು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಕರ್ನಾಟಕ, ಕೇರಳ ರಾಜ್ಯದ ಗಡಿ ಭಾಗವಾದ ಕನ್ಯಾನ, ಕರೋಪಾಡಿ ಪರಿಸರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ನಿಯಂತ್ರಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆಯೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡುತ್ತೇನೆ ಎಂದಷ್ಟೇ ಉತ್ತರಿಸಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ರಾಜ್ಯ ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ರಾಜ್ಯ ಅಲ್ಪಸಂಖ್ಯಾತ ನಿಗಮದ ಎಂ.ಎ.ಗಫೂರ್, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ರಹಿಮಾನ್, ಕರೋಪಾಡಿ ಗ್ರಾಪಂ ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ, ಬಂಟ್ವಾಳ ತಾಲೂಕು ಇಂಟಕ್ ಅಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ವಿ.ಎ.ರಶೀದ್, ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್., ವಿಟ್ಲ ಠಾಣಾಧಿಕಾರಿ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News