10,000 ಅಮೆರಿಕನ್ನರನ್ನು ನೇಮಿಸಲು ಮುಂದಾಗಿರುವ ಇನ್ಫೋಸಿಸ್

Update: 2017-05-02 13:13 GMT

ವಾಶಿಂಗ್ಟನ್, ಮೇ 2: ಅಮೆರಿಕದ ನೂತನ ವೀಸಾ ನೀತಿಗಳನ್ನು ಎದುರಿಸಲು ಸಜ್ಜಾಗಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿ ಇನ್ಫೋಸಿಸ್, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅಮೆರಿಕದಲ್ಲಿ ಸುಮಾರು 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಹಾಗೂ ಅಲ್ಲಿ ನಾಲ್ಕು ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಿದೆ.

  ನೂತನ ನೇಮಕಾತಿಗಳು ಮತ್ತು ಸಂಶೋಧನಾ ಕೇಂದ್ರಗಳ ಮೂಲಕ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಬಳಕೆದಾರ ಅನುಭವ ಮತ್ತು ಕ್ಲೌಡ್ ಹಾಗೂ ಬಿಗ್ ಡಾಟಾ ಮುಂತಾದ ತಂತ್ರಜ್ಞಾನ ಕ್ಷೇತ್ರದ ನೂತನ ವಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡಲು ಇನ್ಫೋಸಿಸ್‌ಉದ್ದೇಶಿಸಿದೆ.
ಅಮೆರಿಕದ ರಾಜ್ಯ ಇಂಡಿಯಾನದಲ್ಲಿ ಆಗಸ್ಟ್‌ನಲ್ಲಿ ಆರಂಭಗೊಳ್ಳುವ ಮೊದಲ ಕೇಂದ್ರವು 2021ರ ವೇಳೆಗೆ ಅಮೆರಿಕನ್ನರಿಗಾಗಿ 2,000 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಪಿಟಿಐಗೆ ತಿಳಿಸಿದರು.

 ಇತರ ಮೂರು ಕೇಂದ್ರಗಳನ್ನು ಎಲ್ಲಿ ಸ್ಥಾಪಿಸಬೇಕೆನ್ನುವುದನ್ನು ಮುಂದಿನ ಕೆಲ ತಿಂಗಳುಗಳಲ್ಲಿ ನಿರ್ಧರಿಸಲಾಗುವುದು. ಈ ಕೇಂದ್ರಗಳು ತಂತ್ರಜ್ಞಾನ ಮತ್ತು ಹೊಸತನದ ಬಗ್ಗೆ ಉದ್ಯೋಗಿಗಳಿಗೆ ತರಬೇತಿ ನೀಡುವುದರ ಜೊತೆಗೆ, ಆರ್ಥಿಕ ಸೇವೆಗಳು, ಉತ್ಪಾದನೆ, ಆರೋಗ್ಯರಕ್ಷಣೆ, ಚಿಲ್ಲರೆ ಮಾರಾಟ ಮತ್ತು ಇಂಧನ ಮುಂತಾದ ಮಹತ್ವದ ಕ್ಷೇತ್ರಗಳಲ್ಲಿ ಗ್ರಾಹಕರೊಂದಿಗೆ ನಿಕಟವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದರು.

2016-17ರ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ಗಳಿಸಿದ 10.2 ಬಿಲಿಯ ಡಾಲರ್ (65,508 ಕೋಟಿ ರೂಪಾಯಿ) ಆದಾಯದ 60 ಶೇಕಡಕ್ಕಿಂತಲೂ ಹೆಚ್ಚಿನ ಭಾಗ ಉತ್ತರ ಅಮೆರಿಕದ ಮಾರುಕಟ್ಟೆಯಿಂದಲೇ ಬಂದಿದೆ.

ಆದಾಗ್ಯೂ, ಅಮೆರಿಕದ ಕಠಿಣ ವೀಸಾ ನಿಯಮಗಳ ಪರಿಣಾಮಗಳನ್ನು ಎದುರಿಸುವುದಕ್ಕಾಗಿ ಮಾತ್ರ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಸಿಕ್ಕಾ ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ವರ್ಚುವಲ್ ರಿಯಲಿಟಿ ಮುಂತಾದ ನೂತನ ತಂತ್ರಜ್ಞಾನಗಳ ಬಳಕೆಯಲ್ಲಿ ವೃದ್ಧಿಯಾಗಿದೆ ಎಂದು ಹೇಳಿದ ಅವರು, ಸಾಂಪ್ರದಾಯಿಕ ಕೆಲಸಗಳಲ್ಲೂ ಯಂತ್ರಗಳ ಬಳಕೆ ಹೆಚ್ಚಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News