×
Ad

ಬಿಎಸ್‌ಎಫ್ ಯೋಧರ ಶಿರಚ್ಚೇದನ ಪ್ರಕರಣ: ಭಾರತ-ಪಾಕ್ ಸೇನೆ ಹಾಟ್‌ಲೈನ್ ಮಾತುಕತೆ

Update: 2017-05-02 19:49 IST

   ಇಸ್ಲಾಮಾಬಾದ್,ಮೇ2: ಪಾಕ್ ಪಡೆಗಳು ಗಡಿನಿಯಂತ್ರಣ ರೇಖೆ ದಾಟಿ, ಭಾರತೀಯ ಗಡಿಭದ್ರತಾಪಡೆಯ ಇಬ್ಬರು ಯೋಧರ ಶಿರಚ್ಛೇದನ ಗೈದ ಬರ್ಬರ ಘಟನೆ ನಡೆದ ಒಂದು ದಿನದ ಬಳಿಕ ಭಾರತ ಹಾಗೂ ಪಾಕಿಸ್ತಾನದ ಸೇನಾ ಕಮಾಂಡರ್‌ಗಳು ಹಾಟ್‌ಲೈನ್ ಮೂಲಕ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ 11:30ರ ವೇಳೆಗೆ ಉಭಯದೇಶಗಳ ಸೇನಾಕಮಾಂಡರ್‌ಗಳ ನಡುವೆ ಹಾಟ್‌ಲೈನ್ ಸಂಪರ್ಕವೇರ್ಪಟ್ಟಿರುವುದಾಗಿ ಜಿಯೋ ನ್ಯೂಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾನು ಕದನವಿರಾಮವನ್ನು ಉಲ್ಲಂಘಿಸಿದ್ದೇನೆ ಹಾಗೂ ಭಾರತೀಯ ಯೋಧರಿಬ್ಬರ ದೇಹಗಳನ್ನು ವಿರೂಪಗೊಳಿಸಿದ್ದೇನೆಂದು ತನ್ನ ವಿರುದ್ಧ ಭಾರತ ಮಾಡಿರುವ ಆರೋಪಗಳನ್ನು ಪಾಕಿಸ್ತಾನವು ತಿರಸ್ಕರಿಸಿದೆಯೆಂದು ವರದಿ ಹೇಳಿದೆ.

 ಗಡಿನಿಯಂತ್ರಣ ರೇಖೆಯಲ್ಲಿರುವ ರಾವಲ್‌ಕೋಟ್-ಪೂಂಚ್ ವಲಯದಲ್ಲಿ ಸೋಮವಾರ ರಾತ್ರಿ ಉಭಯ ಸೇನಾಪಡೆಗಳ ಸ್ಥಳೀಯ ಕಮಾಂಡರ್‌ಗಳು ಮಾತುಕತೆ ನಡೆಸಿದ ಕೆಲವು ತಾಸುಗಳ ಬಳಿಕ ಎರಡೂ ದೇಶಗಳ ಉನ್ನತ ಸೇನಾಕಮಾಂಡರ್‌ಗಳ ನಡುವೆ ಹಾಟ್‌ಲೈನ್ ಮೂಲಕ ಸಂಭಾಷಣೆ ನಡೆಸಿದರೆಂದು ಜಿಯೋ ನ್ಯೂಸ್ ತಿಳಿಸಿದೆ.

 ಪಾಕಿಸ್ತಾನವು ಯಾವುದೇ ಕದನವಿರಾಮವನ್ನು ಉಲ್ಲಂಘಿಸಿಲ್ಲ ಮತ್ತು ಭಾರತೀಯ ಸೈನಿಕರ ಮೃತದೇಹಗಳನ್ನು ವಿರೂಪಗೊಳಿಸಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಅನಗತ್ಯವಾಗಿ ಅತಿರಂಜಿತವಾದ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆಯೆಂದು ಪಾಕಿಸ್ತಾನ ಸೇನೆಯ ಸ್ಥಳೀಯ ಕಮಾಂಡರ್, ತನ್ನ ಭಾರತೀಯ ಸಹವರ್ತಿಗೆ ಸ್ಪಷ್ಟಪಡಿಸಿದ್ದಾರೆಂದು ಪಾಕ್‌ಸೇನೆಯ ಸಾರ್ವಜನಿಕ ಸಂಬಂಧಗಳ ಘಟಕವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಗಡಿನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡಲು ಪಾಕಿಸ್ತಾನವು ಸಂಪೂರ್ಣ ಬದ್ಧವಾಗಿದ್ದು, ಭಾರತದಿಂದಲೂ ಅದನ್ನೇ ನಿರೀಕ್ಷಿಸುತ್ತಿದೆಯೆಂದು ಹೇಳಿಕೆಯು ತಿಳಿಸಿದೆ.

ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತವು ವಿವೇಚನಾಯುತವಾಗಿ ನಡೆದುಕೊಳ್ಳುವುದು ಹಾಗೂ ಗಡಿಯಲ್ಲಿ ಶಾಂತಿಯನ್ನು ಕದಡುವಂತಹ ಯಾವುದೇ ಹೆಜ್ಜೆಯನ್ನಿಡಲಾರದು ಎಂದು ತಾನು ಆಶಿಸುವುದಾಗಿ ಪಾಕಿಸ್ತಾನ ಸೇನೆಯು ಹೇಳಿದೆ.

  

ಜಮ್ಮುಕಾಶ್ಮೀರದ ಪೂಂಚ್‌ಜಿಲ್ಲೆಯಲ್ಲಿ ಸೋಮವಾರ ಎಲ್‌ಓಸಿಗೆ ತಾಗಿಕೊಂಡಿರುವ ಭಾರತದ ಕೃಷ್ಣಾ ಘಾಟಿ ಪ್ರದೇಶದಲ್ಲಿ 250 ಮೀಟರ್‌ವರೆಗೆ ನುಗ್ಗಿ ಬಂದ ಪಾಕ್ ಸೈನಿಕರು, ಬಿಎಸ್‌ಎಫ್‌ನ ಓರ್ವ ಜೂನಿಯನ್ ಕಮೀಶನ್ಡಅಧಿಕಾರಿ ಹಾಗೂ ಇನ್ನೋರ್ವ ಹೆಡ್‌ಕಾನ್ಸ್‌ಟೇಬಲ್‌ನನ್ನು ಹತ್ಯೆಗೈದು, ಆವರ ಶಿರಚ್ಛೇದನ ಮಾಡಿ ಬರ್ಬರತೆಯನ್ನು ಪ್ರದರ್ಶಿಸಿತ್ತು.

ಪಾಕಿಸ್ತಾನದ ಗಡಿ ಕಾರ್ಯ ಪಡೆ (ಬ್ಯಾಟ್) ಭಾರತದ ಗಡಿದಾಟಿ ಒಳನುಗ್ಗಿ ಬಂದಿತ್ತು. ಇದೇ ಸಂದರ್ಭದಲ್ಲಿ ಪಾಕ್ ಸೇನೆಯು ಕೃಷ್ಣಾ ಘಾಟಿ ವಲಯದಲ್ಲಿರುವ ಎರಡು ಮುಂಚೂಣಿ ಠಾಣೆಗಳ ಮೇಲೆ ರಾಕೆಟ್ ಹಾಗೂ ಮೋರ್ಟಾರ್‌ಗಳಿಂದ ದಾಳಿ ನಡೆಸಿತ್ತು.

 ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ಕಾರ್ಯಾಚರಣೆಗಳನ್ನು ನಡೆಸಲು ಪಾಕಿಸ್ತಾನವು ತನ್ನ ಬ್ಯಾಟ್ ತಂಡವನ್ನು ಬಳಸಿಕೊಳ್ಳುತ್ತಿದೆ. ಪಾಕ್ ಸೇನೆಯ ವಿಶೇಷ ಪಡೆಗಳ ಯೋಧರನ್ನು ಬ್ಯಾಟ್‌ನಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ. ಆದರೆ ಕೆಲವೊಮ್ಮೆ ಉಗ್ರಗಾಮಿಗಳು ಕೂಡಾ ಈ ತಂಡದೊಂದಿಗೆ ಸೇರಿಕೊಳ್ಳುತ್ತಿವೆಯೆಂಬ ಆರೋಪಗಳು ಕೇಳಿಬರುತ್ತಿವೆ.

 ಪಾಕ್‌ನ ಬರ್ಬರ ಕೃತ್ಯಕ್ಕೆ ಸೂಕ್ತ ಪ್ರತ್ಯುತ್ತರ: ಸೇನೆ

ಜಮ್ಮುಕಾಶ್ಮೀರದ ಗಡಿನಿಯಂತ್ರಣ ರೇಖೆಯ ಬಳಿ ಭಾರತೀಯ ಗಡಿಭದ್ರತಾ ಪಡೆಯ ಇಬ್ಬರು ಯೋಧರ ಶಿರಚ್ಚೇದನದ ಘಟನೆಯುಅತ್ಯಂತ ಬರ್ಬರವಾದ ಕೃತ್ಯವಾಗಿದೆ ಹಾಗೂ ಅದಕ್ಕೆ ಸೂಕ್ತ ಪ್ರತ್ಯುತ್ತರದ ಅಗತ್ಯವಿದೆಯೆಂದು ಭಾರತೀಯ ಸೇನಾಪಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಎ.ಕೆ. ಭಟ್ ಮಂಗಳವಾರ ತಿಳಿಸಿದ್ದಾರೆ.

 ಪಾಕಿಸ್ತಾನದ ಗಡಿ ಕಾರ್ಯಪಡೆಯ (ಬ್ಯಾಟ್) ತಂಡವು ಜಮ್ಮುಕಾಶ್ಮೀರದ ಕೃಷ್ಣಾ ಘಾಟಿ ವಲಯದಲ್ಲಿ, ಭಾರತಕ್ಕೆ ಸೇರಿದ ಪ್ರದೇಶದೊಳಗೆ 200 ಮೀಟರ್ ವರೆಗೂ ಸೋಮವಾರ ನುಗ್ಗಿ ಬಂದಿತ್ತು. ಅದು ಬಿಎಸ್‌ಎಫ್ ಯೋಧರಾದ ಪ್ರೇಮ್ ಸಾಗರ್ ಹಾಗೂ ಪರಮ್‌ಜಿತ್ ಸಿಂಗ್ ಅವರನ್ನು ಹಿಡಿದು, ಅವರ ಶಿರಚ್ಛೇದನ ಮಾಡಿರುವುದು ದೇಶಾದ್ಯಂತ ಭಾರೀ ಆಕ್ರೋಶವನ್ನು ಸೃಷ್ಟಿಸಿದೆ.

 ಈ ಬರ್ಬರ ಹಾಗೂ ಅಮಾನವೀಯ ಕೃತ್ಯವು ನಾಗರಿಕತೆಯ ಎಲ್ಲಾ ನಿಯಮಗಳನ್ನು ಮೀರಿದ್ದು, ಅದನ್ನು ಪ್ರಬಲವಾಗಿ ಖಂಡಿಸಬೇಕಾಗಿದೆ ಮತ್ತು ಸೂಕ್ತ ಪ್ರತ್ಯುತ್ತರಕ್ಕೆ ಅರ್ಹವಾಗಿದೆಯೆಂದು ಡಿಜಿಎಂಓ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News