ಮುಸ್ಲಿಮರ ಮೇಲಿನ ಪೊಲೀಸ್ ದೌರ್ಜನ್ಯ ಕೊನೆಗೊಳ್ಳಲಿ: ಕೆ.ಅಶ್ರಫ್
ಮಂಗಳೂರು, ಮೇ 2: ಹಲವು ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಅಮಾಯಕ ಮುಸ್ಲಿಮರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯಗಳು ಕೊನೆಗೊಳ್ಳಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ಒತ್ತಾಯಿಸಿದ್ದಾರೆ.
ಅಹ್ಮದ್ ಖುರೇಷಿ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ವಿರುದ್ಧ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ನಗರ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾದ ‘ಮಂಗಳೂರು ಚಲೋ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸರು ಮುಸ್ಲಿಮರ ಮನೆಗಳಿಗೆ ಅಕ್ರಮ ಪ್ರವೇಶಗೈದು ಮುಗ್ಧ ಯುವಕರನ್ನು ಅಕ್ರಮವಾಗಿ ಕೂಡಿಹಾಕಿ ಹಿಂಸಿಸುವ ಮತ್ತು ದೌರ್ಜನ್ಯ ಎಸಗುವ ಕೃತ್ಯಗಳು ನಿಲ್ಲಬೇಕು. ಅಹ್ಮದ್ ಖುರೇಷಿ ಮೇಲಿನ ದೌರ್ಜನ್ಯದ ಮೂಲಕ ಸಮುದಾಯದ ಮೇಲಿನ ಪೊಲೀಸ್ ದೌರ್ಜನ್ಯಗಳು ಇಲ್ಲಿಗೆ ಕೊನೆಗೊಳ್ಳಬೇಕು ಎಂದು ಅಶ್ರಫ್ ಹೇಳಿದರು.
"ಖುರೇಷಿಗೆ ಆಗಿರುವ ಅನ್ಯಾಯದ ವಿರುದ್ಧ ನಾನು ಜನಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಾವೇ ಚುನಾಯಿಸಿ ಕಳುಹಿಸಿರುವ ಜನಪ್ರತಿನಿಧಿಗಳೇ ನಮ್ಮ ಪಾಲಿಗೆ ಗಂಡಾಂತರವಾಗಿ ಪರಿಣಮಿಸಿದ್ದಾರೆ. ನಮ್ಮ ಹೋರಾಟದ ವಿಷಯದಲ್ಲಿ ಅವರು ಸೌಜನ್ಯಕ್ಕಾದರೂ ನಮ್ಮನ್ನು ಕರೆಸಿ ಮಾತನಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದವನು. ಹಾಗಂತ ಸಮುದಾಯಕ್ಕೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ. ನನ್ನ ಮೊದಲ ಆದ್ಯತೆ ಸಮುದಾಯ, ಅನಂತರ ಪಕ್ಷ. ಸಮುದಾಯದ ಮೇಲಿನ ಅನ್ಯಾಯದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇನೆ" ಎಂದರು.
ಜಿಲ್ಲೆಯ ಇಡೀ ಪೊಲೀಸ್ ಇಲಾಖೆಯನ್ನು ದೂರುವುದಿಲ್ಲ. ಕೆಲವು ಉತ್ತಮ ಅಧಿಕಾರಿಗಳೂ ಇದ್ದಾರೆ. ಕೆಲವು ಕೆಟ್ಟ ಅಧಿಕಾರಿಗಳಿಂದ ವಾತಾವರಣ ಹಾಳಾಗುತ್ತಿದೆ. ಪೊಲೀಸರಿಗೆ ಸಮುದಾಯ, ಜಾತಿ, ಧರ್ಮದ ಬೇಧ ಇರಬಾರದು. ಪೊಲೀಸರು ನಿಷ್ಪಕ್ಷಪಾತವಾಗಿರಬೇಕು. ಖುರೇಶಿ ಪ್ರಕರಣದ ಮೊದಲೂ ಪೊಲೀಸರು ಮುಸ್ಲಿಮರ ಮೇಲೆ ಅನೇಕ ದೌರ್ಜನ್ಯಗಳನ್ನು ನಡೆಸಿದ್ದಾರೆ. ಕಾರ್ತಿಕ್‌ರಾಜ್ ಪ್ರಕರಣದಲ್ಲೂ ಪೊಲೀಸರು ಮುಸ್ಲಿಂ ಯುವಕರನ್ನು ಠಾಣೆಗೆ ಕರೆಸಿ ದೌರ್ಜನ್ಯ ಎಸಗಿದ್ದಾರೆ. ಕಾರ್ತಿಕ್‌ರಾಜ್ ಕೊಲೆ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ಕೊಣಾಜೆ ಪೊಲೀಸರಿಗೂ ಗೊತ್ತಿತ್ತು. ಆದರೆ, ಇದನ್ನು ಮುಸ್ಲಿಮರ ಮೇಲೆ ಹಾಕುವ ಪ್ರಯತ್ನವೂ ನಡೆದಿತ್ತು ಎಂದು ಆರೋಪಿಸಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಫಿ ಸಅದಿ ಎನ್‌ಕೆಎಂ ಬೆಂಗಳೂರು, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಯಾಕೂಬ್ ಸಅದಿ, ಅಶ್ರಫ್ ಕಿನಾರ ಮಂಗಳೂರು, ನೌಷಾದ್ ಹಾಜಿ ಸೂರಲ್ಪಾಡಿ, ಸುಹೈಲ್ ಕಂದಕ್, ಖುರೇಶಿ ಸಹೋದರ ನಿಶಾದ್, ಅಬ್ದುಲ್ ಖಾದರ್, ಕಾರ್ಪೊರೇಟರ್ ಅಬ್ದುಲ್ ಅಜೀಝ್, ಹುಸೈನ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಹಮೀದ್ ಬಜ್ಪೆ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಅಶ್ರಫ್ ಕಿನಾರ ಸ್ವಾಗತಿಸಿದರು. ಸಿ.ಎಂ.ಮುಸ್ತಫಾ ವಂದಿಸಿದರು. ಹ್ಯೂಮನ್ ರೈಟ್ಸ್ ಫೆಡರೇಶನ್‌ನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಯು. ಕಾರ್ಯಕ್ರಮ ನಿರೂಪಿಸಿದರು.
ಖುರೇಶಿ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಮಸೂದ್
ಖುರೇಶಿ ಪ್ರಕರಣವನ್ನು ಸರಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಆಗ್ರಹಿಸಿದ್ದಾರೆ. ನಮ್ಮದು ನ್ಯಾಯಕ್ಕಾಗಿ ಹೋರಾಟ. ಯಾವುದೇ ಪಕ್ಷದಡಿಯಲ್ಲಿ ಹೋರಾಟ ನಡೆಯುತ್ತಿಲ್ಲ. ಹೋರಾಟಕ್ಕೆ ಸಹಕಾರ ನೀಡಿದ್ದೇವೆ. ನಾವಿಲ್ಲಿ ಹೋರಾಟದ ಬೀಜವನ್ನು ಬಿತ್ತಿದ್ದೇವೆ. ಅದಕ್ಕೆ ಯಾರು ನೀರುಣಿಸುತ್ತಾರೋ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದರು.
ವಾಹನ ಸಂಚಾರದ ಮೇಲೆ ಕ್ಯಾಮರಾ ಕಣ್ಗಾವಲು
ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮಂಗಳವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ‘ಮಂಗಳೂರು ಚಲೋ’ ಕಾರ್ಯಕ್ರಮದ ನಿಮಿತ್ತ ರಾ.ಹೆ. 66ರಲ್ಲಿ ವಾಹನ ಸಂಚಾರದ ಮೇಲೆ ವಿಶೇಷ ಪೊಲೀಸ್ ತಂಡಗಳ ಮೂಲಕ ಇಲಾಖೆ ಕ್ಯಾಮರಾ ಕಣ್ಗಾವಲು ಏರ್ಪಡಿಸಿತ್ತು.
ಕಮಿಷನರ್ ಮತ್ತು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳ ಹಲವೆಡೆ ಪೊಲೀಸರು ಕ್ಯಾಮರಾಗಳ ಮೂಲಕ ‘ಮಂಗಳೂರು ಚಲೋ’ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಾಹನಗಳ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವ ಜೊತೆಗೆ ವಾಹನಗಳನ್ನು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು.
ಬಪ್ಪನಾಡು ಚೆಕ್ ಪಾಯಿಂಟ್, ಹೊಸಬೆಟ್ಟು, ಕೊಟ್ಟಾರ ಚೌಕಿ ಸೇರಿದಂತೆ ಹಲವೆಡೆ ಕ್ಯಾಮರಾ ಕಣ್ಗಾವಲನ್ನು ಏರ್ಪಡಿಸಲಾಗಿತ್ತು. ಈ ವಿಶೇಷ ಕಣ್ಗಾವಲನ್ನು ಬೆಳಗ್ಗೆ 9 ರಿಂದ ಕಾರ್ಯಕ್ರಮಕ್ಕೆ ತೆರಳಿ ವಾಹಗಳು ಹಿಂದಿರುಗುವ ರಾತ್ರಿ 10 ಗಂಟೆಯ ವರೆಗೂ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಅಲ್ಲದೆ, ಕಾರ್ಯಕ್ರಮಕ್ಕೆ ತೆರಳಿದ್ದ ವಾಹನಗಳ ನೋಂದಣಿ ಸಂಖೆಯನ್ನೂ ಪರಿಶೀಲಿಸಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.