×
Ad

ಆಟೋ-ಜೀಪ್ ಮುಖಾಮುಖಿ ಢಿಕ್ಕಿ: 9 ಮಂದಿಗೆ ಗಾಯ

Update: 2017-05-02 20:31 IST

ಬಂಟ್ವಾಳ, ಮೇ 2: ಕೊಳ್ನಾಡು ಗ್ರಾಮದ ಕುಡ್ತಮುಗೇರು ಕಲ್ಕಾಜೆ ಎಂಬಲ್ಲಿ ಆಟೋ ರಿಕ್ಷಾ ಹಾಗೂ ಜೀಪು ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಮಕ್ಕಳು ಸಹಿತ 9 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದ್ದು, ಅವರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ನವಗ್ರಾಮದ ಬೊಳ್ಪಾದೆ ನಿವಾಸಿಗಳಾದ ರಫೀಕ್(35), ಲತೀಫ್(32), ಲೀಲಾವತಿ(35), ಆದಿತ್ಯ(10), ಅಭಿಷೇಕ್(4), ಅಜಯ್ ಕುಮಾರ್(12), ಶಿಫಾನಾ(4), ಶರಪುನ್ನೀಸಾ(26) ಹಾಗೂ ಶಿಬಿಲಾ(1) ಗಾಯಗೊಂಡವರು.

ಗಾಯಾಳುಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯಗೊಂಡಿದ್ದ ಲೀಲಾವತಿ, ಅಜಯ್ ಕುಮಾರ್, ಆದಿತ್ಯ, ಅಭಿಷೇಕ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರು ಗಾಯಾಳುಗಳನ್ನು ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೊಳ್ಪಾದೆಯಿಂದ ಕುಡ್ತಮುಗೇರು ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಹಾಗೂ ಕುಡ್ತಮುಗೇರು ಸಮೀಪದ ಕಲ್ಕಾಜೆ ಎಂಬಲ್ಲಿ ಎದುರಿನಿಂದ ಬಂದ ಜೀಪು ಢಿಕ್ಕಿಯಾದ ಪರಿಣಾಮ ರಿಕ್ಷಾ ರಸ್ತೆಗೆ ಉರುಳಿದೆ. ಬಳಿಕ ಸ್ಥಳೀಯರು ರಿಕ್ಷಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News