×
Ad

ಮಿಗ್ ವಿಮಾನದ ಪತನ: ವಿಂಗ್ ಕಮಾಂಡರ್‌ಗೆ 55 ಲ.ರೂ. ಪರಿಹಾರ ನೀಡಲು ಕೇಂದ್ರ, ಎಚ್‌ಎಎಲ್‌ಗೆ ಆದೇಶ

Update: 2017-05-02 20:49 IST

 ಹೊಸದಿಲ್ಲಿ,ಮೇ 2: ಹಾಲಿ ಸೇವೆಯಲ್ಲಿರುವ, 2005ರಲ್ಲಿ ಮಿಗ್-21 ವಿಮಾನ ಪತನದ ಬಳಿಕ ವಿಮಾನವನ್ನು ಹಾರಿಸಲು ಅನರ್ಹಗೊಂಡಿರುವ ವಿಂಗ್ ಕಮಾಂಡರ್ ಸಂಜೀತ್ ಸಿಂಗ್ ಕಾಲಿಯಾ ಅವರಿಗೆ 55 ಲ.ರೂ.ಪರಿಹಾರವನ್ನು ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರ ಸರಕಾರ ಮತ್ತು ಎಚ್‌ಎಲ್‌ಗೆ ಆದೇಶಿಸಿದೆ.

 ರಾಜಸ್ಥಾನದ ನಾಲ್‌ನಲ್ಲಿರುವ ವಾಯುಪಡೆ ನೆಲೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲಿಯಾ 2005,ಜ.4ರಂದು ದೈನಂದಿನ ಹಾರಾಟದಲ್ಲಿ ತೊಡಗಿದ್ದಾಗ ತಾಂತ್ರಿಕ ದೋಷದಿಂದ ಮಿಗ್-21 ವಿಮಾನ ಪತನಗೊಂಡಿತ್ತು. ಕಾಲಿಯಾ ಅದಕ್ಕೂ ಮುನ್ನ ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದರಾದರೂ ತೀವ್ರವಾಗಿ ಗಾಯಗೊಂಡಿದ್ದ ಅವರ ವಿಮಾನ ಚಾಲನೆ ಸಾಮರ್ಥ್ಯವನ್ನು ಆ ಅಪಘಾತವು ಶಾಶ್ವತ ವಾಗಿ ಕಿತ್ತುಕೊಂಡಿತ್ತು.

ವಿಮಾನದ ತಯಾರಿಕೆ ದೋಷಕ್ಕಾಗಿ ವಿಧ್ಯುಕ್ತ ಕ್ಷಮೆ ಯಾಚಿಸುವಂತೆ ಕೇಂದ್ರ ಮತ್ತು ಎಚ್‌ಎಎಲ್‌ಗೆ ನಿರ್ದೇಶ ನೀಡುವಂತೆ ಕೋರಿ ಕಾಲಿಯಾ 2013ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಸಶಸ್ತ್ರ ಪಡೆಗಳನ್ನು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಅಪಾಯಕ್ಕೆ ಒಡ್ಡುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ ನ್ಯಾ.ರವೀಂದ್ರ ಭಟ್ ಮತ್ತು ನ್ಯಾ.ದೀಪಾ ಶರ್ಮಾ ಅವರ ವಿಭಾಗೀಯ ಪೀಠವು ಕಾಲಿಯಾಗೆ ಪರಿಹಾರವಾಗಿ ಐದು ಲ.ರೂ.ನೀಡುವಂತೆ ಕೇಂದ್ರ ಸರಕಾರಕ್ಕೆ ಮತ್ತು 50 ಲ.ರೂ.ನೀಡುವಂತೆ ವಿಮಾನವನ್ನು ತಯಾರಿಸಿದ್ದ ಎಚ್‌ಎಎಲ್‌ಗೆ ಆದೇಶ ನೀಡಿತು.

 ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ನಿರೀಕ್ಷಿತ ಸಾಮಾನ್ಯ ಅಪಾಯಕ್ಕಿಂತ ಹೆಚ್ಚಿನ ಅಪಾಯಕ್ಕೆ ಒಡ್ಡುವುದು ಬದುಕುವ ಮೂಲಭೂತ ಹಕ್ಕಿಗೆ...ವಿಶೇಷವಾಗಿ ಸಂವಿಧಾನವು ಖಾತರಿ ನೀಡಿರುವ ಸುರಕ್ಷಿತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಹಕ್ಕಿಗೆ ವಿರುದ್ಧ ವಾಗಿದೆ ಎಂದು ನ್ಯಾಯಾಲಯವು ಎತ್ತಿ ಹಿಡಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News