×
Ad

100 ಗ್ರಾಂ ಮೊಸರಿಗೆ 972 ರೂ., ಲೀಟರ್ ಎಣ್ಣೆಗೆ 1,241 ರೂ. ಕೊಟ್ಟ ರೈಲ್ವೆ ಅಧಿಕಾರಿಗಳು !

Update: 2017-05-02 21:15 IST

ಮುಂಬೈ.ಮೇ 2: ಕೇಂದ್ರ ರೈಲ್ವೆಯ ಕೇಟರಿಂಗ್ (ಆಹಾರ ಪೂರೈಕೆ) ಇಲಾಖೆಯು ಗರಿಷ್ಠ ರಿಟೇಲ್ ಮಾರಾಟ ದರ (ಎಂಆರ್‌ಪಿ)ಕ್ಕಿಂತ ಲೂ ಭಾರೀ ಹೆಚ್ಚಿನ ಬೆಲೆಯಲ್ಲಿ ನಿರ್ದಿಷ್ಟ ಆಹಾರವಸ್ತುಗಳನ್ನು ಖರೀದಿಸಿ ತನ್ನ ಗೋದಾಮುಗಳಲ್ಲಿ ಶೇಖರಿಸಿಟ್ಟಿತೆಂದು ಮಾಹಿತಿ ಹಕ್ಕು ಕಾಯ್ದೆಯಡಿ ಇತ್ತೀಚೆಗೆ ಸಲ್ಲಿಸಲಾದ ಅರ್ಜಿಯಿಂದ ಬಯಲಿಗೆ ಬಂದಿದೆ.

ರೈಲ್ವೆ ಇಲಾಖೆಯು ಖರೀದಿಸುವ ಆಹಾರವಸ್ತುಗಳ ಕುರಿತು ಮಾಹಿತಿ ಕೋರಿ ಸಾಮಾಜಿಕ ಕಾರ್ಯಕರ್ತ ಅಜಯ್ ಬೋಸ್ ಎಂಬವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ರೈಲ್ವೆ ಅಧಿಕಾರಿಗಳು ನಿರಾಕರಿಸಿದ್ದರು. ಈ ಬಗ್ಗೆ ಅವರು ಎರಡು ಬಾರಿ ಮೇಲ್ಮನವಿ ಸಲ್ಲಿಸಿದಾಗ, ಕೊನೆಗೂ ಇಲಾಖೆಯಿಂದ ಉತ್ತರ ದೊರೆಯಿತು. ಪ್ರತಿ ಕೆ.ಜಿ. ಅಮುಲ್ ಮೊಸರನ್ನು ಇಲಾಖೆಯು 972 ರೂ.ಗೆ ಖರೀದಿಸಿರುವುದು ಇದರಿಂದ ಬಯಲಿಗೆ ಬಂದಿತು.

  ರೈಲ್ವೆಯ ಆಹಾರ ಪೂರೈಕೆ ಇಲಾಖೆಯು ಭಾರೀ ನಷ್ಟದಲ್ಲಿ ನಡೆಯುತ್ತಿದೆಯೆಂದು ಅರಿತ ಬಳಿಕ ಬೋಸ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು.

‘‘2016ರ ಜುಲೈನಲ್ಲಿ ನಾನು ಈ ಅರ್ಜಿಯನ್ನು ಸಲ್ಲಿಸಿದ್ದೆ. ಆದರೆ ಕೇಂದ್ರೀಯ ರೈಲ್ವೆಯಿಂದ ತನಗೆ ಈ ಬಗ್ಗೆ ಯಾವುದೇ ಉತ್ತರ ದೊರೆತಿಲ್ಲ. ಅವರು ಯಾವುದೋ ವಿಷಯವನ್ನು ಮುಚ್ಚಿಹಾಕಲು ಬಯಸುತ್ತಿರುವಂತೆ ಕಂಡುಬಂದಿತು. ತಾನು ಈ ಬಗ್ಗೆ ಮೇಲ್ಮನವಿಯನ್ನು ಸಲ್ಲಿಸಿದೆ. ಮೇಲ್ಮನವಿ ಪ್ರಾಧಿಕಾರವು, ನಾನು ಕೋರಿದ್ದ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಸೂಚಿಸಿತು. ಇದರ ಹೊರತಾಗಿಯೂ, ಹಲವಾರು ತಿಂಗಳುಗಳ ಬಳಿಕವೂ ತನಗೆ ಯಾವುದೇ ಉತ್ತರ ಬಂದಿಲ್ಲ’’ ಎಂದು ಭೋಸ್ ತಿಳಿಸಿದರು.ಇಲಾಖೆಯು ತನ್ನ ಮನವಿಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿರುವುದನ್ನು ಮನಗಂಡ ಭೋಸ್ ಎರಡನೆ ಮೇಲ್ಮನವಿ ಸಲ್ಲಿಸಿದರು.

ಈ ಬಾರಿಗೆ ತನಗೆ ದೊರೆತ ಮಾಹಿತಿಗಳು ಅತ್ಯಂತ ಆಘಾತಕಾರಿಯಾಗಿತ್ತೆಂದು ಅವರು ಹೇಳಿದ್ದಾರೆ. ‘‘ ರೈಲ್ವೆ ಕೇಟರಿಂಗ್ ವಿಭಾಗವು ಕೇವಲ ಕೆ.ಜಿ.25 ರೂ. ಇರುವ ಅಮುಲ್ ಮೊಸರನ್ನು 972 ರೂ.ಗೆ ಖರೀದಿಸಿತ್ತು. ವಾಸ್ತವವಾಗಿ ರೈಲ್ವೆ ಇಲಾಖೆಯು ಬಹುತೇಕ ಆಹಾರ ವಸ್ತುಗಳನ್ನು ಗರಿಷ್ಠ ರಿಟೇಲ್ ದರಕ್ಕಿಂತ ಅಧಿಕ ಬೆಲೆಯಲ್ಲಿ ಖರೀದಿಸಿತ್ತು’’ ಎಂದು ಬೋಸ್ ತಿಳಿಸಿದ್ದಾರೆ.

 ಮುಂಬೈಯ ಸಿಎಸ್‌ಟಿ ಗೋದಾಮಿಗಾಗಿ ಖರೀದಿಸಿ, ಸಂಗ್ರಹಿಸಿಡಲಾದ ಆಹಾರವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ಕೋರಿ ಅವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಈ ಆಹಾರವಸ್ತುಗಳನ್ನು ಡೆಕ್ಕನ್ ಕ್ವೀನ್ ಹಾಗೂ ಕುರ್ಲಾ-ಹಝ್ರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿರುವ ಜನ ಆಹಾರ್ ಕ್ಯಾಂಟೀನ್ ಆಡುಗೆಶಾಲೆಗಳಿಗೆ ಪೂರೈಕೆ ಮಾಡಲಾಗಿತ್ತು.

 ಆರ್‌ಟಿಐ ಅರ್ಜಿಯಡಿ ದೊರೆತ ಮಾಹಿತಿ ಪ್ರಕಾರ, 2016ರ ಮಾರ್ಚ್‌ನಲ್ಲಿ 58 ಲೀಟರ್ ರಿಫೈನ್ಡ್ ಎಣ್ಣೆಯನ್ನು 72,034 ರೂ.ಗೆ ಅಥವಾ 1 ಲೀಟರ್ ರಿಫೈನ್ಡ್ ಎಣ್ಣೆಯನ್ನು 1241 ರೂ.ಗೆ ಖರೀದಿಸಲಾಗಿತ್ತು. 150 ಪ್ಯಾಕೇಟ್ ಟಾಟಾ ಸಾಲ್ಟ್ ಉಪ್ಪನ್ನು 2670 ರೂ.ಗೆ ಖರೀದಿಸಲಾಗಿತ್ತು. ಈ ಉಪ್ಪಿಗೆ ಪೇಕೆಟ್‌ಗೆ ಆಗ ಗರಿಷ್ಠ 15 ರೂ. ದರವಿದ್ದರೂ, ಅದನ್ನು 49 ರೂ.ನಂತೆ ಖರೀದಿಸಲಾಗಿತ್ತು. ಕುಡಿಯುವ ನೀರು ಹಾಗೂ ಲಘುಪಾನೀಯಗಳನ್ನು ಬಾಟಲಿಗೆ 59 ರೂ.ನಂತೆ ಖರೀದಿಸಲಾಗಿತ್ತು.

       ಆಹಾರ ಪದಾರ್ಥಗಳ ಖರೀದಿ ಹಾಗೂ ವಿತರಣೆಯ ಅಂಕಿಅಂಶಗಳಲ್ಲಿಯೂ ಪರಸ್ಪರ ಹೊಂದಾಣಿಕೆಯಿಲ್ಲದಿರುವುದೂ ಕೂಡಾ ಆರ್‌ಟಿಐ ಉತ್ತರದಿಂದ ಬಯಲಾಗಿದೆ. 250 ಕೆ.ಜಿ. ಗೋಧಿಯನ್ನು 7680 ರೂ.ಗೆ ಖರೀದಿಸಿದ್ದರೂ, ತಾನು 450 ಕೆ.ಜಿ. ಗೋಧಿ ವಿತರಿಸಿರುವುದಾಗಿ ರೈಲ್ವೆ ಇಲಾಖೆ ಹೇಳಿಕೊಂಡಿದೆ. ಅದೇ ರೀತಿ 35 ಕೆ.ಜಿ. ಮೈದಾ ವಿತರಣೆಯಾಗಿರುವುದಾಗಿ ತೋರಿಸಲಾಗಿದ್ದರೆ, ಕೇವಲ 20 ಕೆ.ಜಿ.ಯಷ್ಟೇ ಖರೀದಿಸಲಾಗಿದೆ. 255 ಕೆ.ಜಿ. ಬಸುಮತಿ ಅಕ್ಕಿಯನ್ನು ಖರೀದಿಸಿದ್ದರೂ, ಅದು 745 ಕೆ.ಜಿ.ಯನ್ನು ವಿತರಿಸಿರುವುದಾಗಿ ಹೇಳಿಕೊಂಡಿದೆ.

ಈ ಬಗ್ಗೆ ರೈಲ್ವೆಯ ವಿಭಾಗೀಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿ, ಟೈಪಿಂಗ್ ಪ್ರಮಾದದಿಂದ ಈ ಅಂಕಿಅಂಶಗಳಲ್ಲಿ ಎಡವಟ್ಟಾಗಿರಬೇಕೆಂದು ಹೇಳಿದ್ದಾರೆ ಹಾಗೂ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News