ಕನಕದಾಸರ ಬಗ್ಗೆ ಅನಾವಶ್ಯಕ ಗೊಂದಲ: ಪೇಜಾವರ ಶ್ರೀ
ಉಡುಪಿ, ಮೇ 2: ಉಡುಪಿ ಶ್ರೀಕೃಷ್ಣ ಮಠದ ಕನಕ ಕಿಂಡಿ ಹಾಗೂ ಕನಕದಾಸರದ ವಿಚಾರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
"ಕನಕದಾಸರು ಉಡುಪಿಗೆ ಬಂದೇ ಇಲ್ಲ" ಎಂದು ಮೇಲುಕೋಟೆಯಲ್ಲಿ ಶೆಲ್ವ ಪಿಳ್ಳೆ ನೀಡಿರುವ ಕುರಿತ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಸ್ವಾಮೀಜಿ, ಬುದ್ಧಿಜೀವಿಗಳು ಕನಕನ ಕಿಂಡಿಯನ್ನು ಕಲ್ಪನೆ ಎಂಬುದಾಗಿ ಹೇಳಿದರೆ, ಪಂಡಿತರು ನವಗ್ರಹ ಕಿಂಡಿ ಎಂದು ಕರೆಯುತ್ತಾರೆ. ಕನಕದಾಸರು ಉಡುಪಿಗೆ ಬಂದ ಬಗ್ಗೆ ದಾಖಲೆಗಳಿವೆ. ಈ ಸಂಬಂಧ ವಾದಿರಾಜರು ರಚಿಸಿದ ಹಾಡುಗಳಿವೆ. ಇನ್ನೂ ಒಪ್ಪದಿದ್ದರೆ ನಾವೇನು ಮಾಡಲು ಆಗುವುದಿಲ್ಲ ಎಂದರು.
ಎಲ್ಲರ ಬಗ್ಗೆ ಪವಾಡದ ಕಥೆಗಳು ಇವೆ. ಪುರಂದರದಾಸ, ಶಂಕರಾಚಾರ್ಯ, ರಾಮಾನುಜಾಚಾರ್ಯರ ಪವಾಡವಿದೆ. ಆದರೆ ಕನಕದಾಸರ ಬಗ್ಗೆ ಮಾತ್ರ ಆಕ್ಷೇಪ ಎತ್ತಲಾಗುತ್ತದೆ. ಕನಕದಾಸರು ಹಿಂದುಳಿದವರೆಂದು ಅವರನ್ನು ಕೀಳಾಗಿ ಕಾಣುತ್ತೀರಾ?, ಕುರುಬರ ಭಾವನೆಗೆ ಧಕ್ಕೆಯಾಗುವಂತೆ ಬುದ್ಧಿಜೀವಿಗಳು ಪ್ರಶ್ನಿ ಸುತ್ತಿರುವುದು ಯಾಕೆ. ಬೇರೆಯವರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಸ್ವಾಮೀಜಿ ಪ್ರಶ್ನಿಸಿದರು.