ಕಟೀಲು ಪ್ರಾಥಮಿಕ ಶಾಲಾ ಶತಮಾನೋತ್ಸವ, ಅಕ್ಷರದಾಸೋಹ ಕಟ್ಟಡ ಅಕ್ಷರಾನ್ನಂ ಉದ್ಘಾಟನೆ
ಮುಲ್ಕಿ, ಮೇ,2: ಮನಸ್ಸು, ದೇಹ, ಬುದ್ಧಿಗಳಿಗೆ ಪೂರಕವಾದ ವಾತಾವರಣವನ್ನು ಕಟೀಲು ಕ್ಷೇತ್ರದ ಪರಿಸರದಲ್ಲಿ ಕಾಣಬಹುದು. ಅನ್ನದಾನ, ವಿದ್ಯಾದಾನ ಜೊತೆಗೆ ಯಕ್ಷಗಾನದ ಮೂಲಕ ಕಟೀಲು ದೇವಿ ಎಲ್ಲರಿಗೂ ಅಭಯಪ್ರದವಾಗಿದ್ದಾಳೆ. ಕಟೀಲಿನಲ್ಲಿ ಇನ್ನಷ್ಟು ಯೋಜನೆಗಳು ಸಂಪನ್ನವಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ರವಿವಾರ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಲಾದ ಕಟೀಲು ದೇಗುಲದ ಆರು ಶಿಕ್ಷಣ ಸಂಸ್ಥೆಗಳ ಮೂರು ಸಾವಿರ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಯೋಜನೆಯ ಅನ್ನಛತ್ರ ‘ಅಕ್ಷರಾನ್ನಂ’ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಕಟೀಲಿನ ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೆ ಮಾದರಿಯಾಗುವಂತಹ ಸಾಧನೆ ಮಾಡಿದೆ, ದೇಗುಲದ ವತಿಯಿಂದ ನಡೆಸಲ್ಪಡುವ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕಾಯುತ್ತಿರುವುದೇ ಇಲ್ಲಿನ ಗುಣಮಟ್ಟಕ್ಕೆ ಸಾಕ್ಷಿ. ಇನ್ನಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಸಿಗುವಂತಾಗಲಿ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಪಾಕಶಾಲೆ ಉದ್ಘಾಟಿಸಿದರು. ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಸ್ಮರಣ ಸಂಚಿಕೆ ‘ಶತಾಕ್ಷರಿ’ ಬಿಡುಗಡೆಗೊಳಿಸಿದರು.
ಅಕ್ಷರ ದಾಸೋಹ ಕಟ್ಟಡಕ್ಕೆ ದೇಣಿಗೆ ನೀಡಿದ ಅಶೋಕ್ ಕುಮಾರ್ ಅಮೀನ್, ಕೊಡೆತ್ತೂರು ಬಾಲಕೃಷ್ಣ ಉಡುಪ, ಎಲ್.ವಿ. ಅಮೀನ್, ಮಿಜಾರು ರಾಜೇಶ್ ಶೆಟ್ಟಿ, ಕರುಣಾಕರ ಎಂ. ಶೆಟ್ಟಿ ಮುಂತಾದವರನ್ನು ಸನ್ಮಾನಿಸಲಾಯಿತು.
ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಟೀಲು ತಾ.ಪಂ. ಸದಸ್ಯ ಸುಕುಮಾರ ಸನಿಲ್, ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಕುಮಾರ ಶೆಟ್ಟಿ, ನಟ ಅಣ್ಣು ಧೀರಕ್ ಶೆಟ್ಟಿ, ಪಡುಬಿದ್ರೆ ಸತೀಶ ಶೆಟ್ಟಿ, ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್ ರಾವ್, ಐಕಳ ಹರೀಶ ಶೆಟ್ಟಿ, ನಂದಳಿಕೆ ಕೃಷ್ಣ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ, ಪ್ರಾಚಾರ್ಯರಾದ ಬಾಲಕೃಷ್ಣ ಶೆಟ್ಟಿ, ಜಯರಾಮ ಪೂಂಜ, ಪದ್ಮನಾಭ ಮರಾಠೆ, ಸೋಮಪ್ಪಅಲಂಗಾರು, ಗೋಪಾಲ ಶೆಟ್ಟಿ, ಶಿಕ್ಷಕರಕ್ಷಕ ಸಂಘದ ವೆಂಕಟರಮಣ ಹೆಗಡೆ, ಮುಂತಾದವರಿದ್ದರು.