×
Ad

ಹೆಜಮಾಡಿಯಲ್ಲಿ ಒಳರಸ್ತೆಗೆ ಟೋಲ್ ವಿರೋಧಿಸಿ ಪ್ರತಿಭಟನೆ

Update: 2017-05-02 23:30 IST

ಪಡುಬಿದ್ರೆ, ಮೇ 2: ಟೋಲ್‌ ಸೋರಿಕೆಯಾಗುತ್ತಿದೆ ಎಂಬ ನೆಪವೊಡ್ಡಿ ನವಯುಗ ಕಂಪೆನಿ ಹೆಜಮಾಡಿ ಒಳರಸ್ತೆಗೂ ಟೋಲ್ ಬೂತ್ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ಹೆಜಮಾಡಿ ಗ್ರಾಪಂ, ಟೋಲ್ ವಿರೋಧಿ ಹೋರಾಟ ಸಮಿತಿ ಹಾಗೂ ಸ್ಥಳೀಯರು ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್‌ ಸಂಗ್ರಹ ಕೇಂದ್ರವನ್ನು ನಿರ್ಮಿಸಲಾಗಿದೆ. ಆದರೆ ಕೆಲ ವಾಹನಗಳು ಹೆಜಮಾಡಿಯ ಒಳರಸ್ತೆಯಲ್ಲಿ ಸಂಚರಿಸುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ನವಯುಗ ಕಂಪೆನಿಯು ಹೆಜಮಾಡಿಯ ಒಳರಸ್ತೆಯಲ್ಲೂ ಟೋಲ್‌ ಸಂಗ್ರಹ ಮಾಡಲು ಮುಂದಾಗಿದೆ. ಇದಕ್ಕಾಗಿ ಕಾಮಗಾರಿ ಕಳೆದ ವಾರ ಆರಂಭವಾಗಿತ್ತು. ಈ ವೇಳೆ ಹೆಜಮಾಡಿ ಗ್ರಾಪಂ ಹಾಗೂ ಸ್ಥಳೀಯರು ಕಾಮಗಾರಿಗೆ ತಡೆಯೊಡ್ದಿದ್ದರು. ಒಳರಸ್ತೆಗೆ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣ ಮಾಡಬಾರದು ಎಂದು ವಿರೋಧಿಸಿ ಮಂಗಳವಾರ ಹೆಜಮಾಡಿ ಗ್ರಾಪಂ ಮತ್ತು ಟೋಲ್ ವಿರೋಧಿ ಹೋರಾಟ ಸಮಿತಿ, ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರು ಹೆಜಮಾಡಿ ಚೆಕ್‌ಪೋಸ್ಟ್ ಜಮಾಯಿಸಿ ಮಂಗಳವಾರ ಸಾಂಕೇತಿಕ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಹೆಜಮಾಡಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧಾಕರ ಕರ್ಕೇರ ಮಾತನಾಡಿ, ಹೆಜಮಾಡಿ ಒಳರಸ್ತೆಯಲ್ಲಿ ಟೋಲ್ ಸಂಗ್ರಹದ ಬಗ್ಗೆ ಗ್ರಾಪಂಗೆ ಯಾವುದೇ ಪೂರ್ವ ಮಾಹಿತಿ ಕಂಪೆನಿಯಿಂದ ನೀಡಲಾಗಿಲ್ಲ. ಟೋಲ್ ಸೋರಿಕೆಯ ನೆಪವೊಡ್ಡಿ ಏಕಾಏಕಿ ಒಳರಸ್ತೆಗೆ ಟೋಲ್ ಅಳವಡಿಸುವುದು ಕಾನೂನು ಬಾಹಿರ. ನವಯುಗ ಕಂಪೆನಿಯು ಯಾವುದೇ ಕೆಲಸವನ್ನು ಮಾಡುವಾಗ ಪಂಚಾಯತ್ ನನ್ನು  ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸೋರಿಕೆಯ ವಿಚಾರವಾಗಿ ಕಂಪೆನಿಯು ಪೂರ್ವ ಸರ್ವೇ ಮಾಡಬೇಕಿತ್ತು. ಇಲ್ಲೊಂದು ಒಳರಸ್ತೆ ಇರುವ ಬಗ್ಗೆ ಅವರಿಗೆ ಮೊದಲೇ ಮಾಹಿತಿ ಇತ್ತು. ಈಗ ಏಕಾಏಕಿ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಮಾತನಾಡಿ, ನವಯುಗ ಕಂಪೆನಿಯು ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ಹೋರಾಟ ಮುಂದುವರೆಸಲಿದ್ದು, ಒಳರಸ್ತೆಗೆ ಟೋಲ್ ಸಂಗ್ರಹ ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಹೆಜಮಾಡಿ ಟೋಲ್ ಗೇಟ್ ಸಂಬಂಧ ಹಲವಾರು ಭರವಸೆ ನೀಡಿರುವ ಕಂಪನಿ ಮತ್ತು ಜಿಲ್ಲಾಡಳಿತ ಯಾವುದನ್ನೂ ನೆರವೇರಿಸದೆ ಹೆಜಮಾಡಿ ಜನತೆಗೆ ಮತ್ತೊಂದು ಹೊಡೆತ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್, ಹೋರಾಟ ಸಮಿತಿ ಮುಖಂಡ ಗುಲಾಂ ಮುಹಮ್ಮದ್, ಜೆಡಿಎಸ್ ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ್ ಶೆಟ್ಟಿ, ಗ್ರಾಪಂ ಸದಸ್ಯ ಕಬೀರ್, ಸುಧೀರ್ ಕರ್ಕೇರ, ಕೇಶವ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News