ಶಿರಸಿಗೆ ವಕ್ಫ್ ಬೋರ್ಡ್ ಕಚೇರಿ ಸ್ಥಳಾಂತರಿಸುವುದನ್ನು ವಿರೋಧಿಸಿ ಜಿಲ್ಲಾಡಳಿತಕ್ಕೆ ಮನವಿ

Update: 2017-05-02 18:10 GMT

ಕಾರವಾರ,ಮೇ 2: ವಿನಾಕಾರಣ ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ವಕ್ಫ್ ಬೋರ್ಡ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ವಕ್ಫ್ ಬೋರ್ಡ್ ಕಚೇರಿ ಕಾರವಾರದಲ್ಲೇ ಕಾರ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಕ್ಫ್ ಸಂಸ್ಥೆಗಳ ಸದಸ್ಯರು ಹಾಗೂ 22 ಜಮಾತ್‌ನ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

 ಪ್ರಸ್ತುತ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಕ್ಫ ಕಚೇರಿಯನ್ನು ಶಿರಸಿ ಪಟ್ಟಣಕ್ಕೆ ಸ್ಥಳಾಂತರಿಸಬೇಕು ಎಂದು ಬೆಂಗಳೂರಿನ ರಾಜ್ಯ ವಕ್ಫ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಧಿಕೃತ ಆದೇಶವನ್ನು ಹೊರಡಿಸಿದೆ.ಒಂದು ವೇಳೆ ಕಚೇರಿ ಶಿರಸಿಗೆ ಸ್ಥಳಾಂತರವಾದರೆ ಸಾಕಷ್ಟು ಜನರಿಗೆ ತೊಂದರೆಯಾಗಲಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿರುವ ಈ ಕಚೇರಿಯು ಜಿಲ್ಲೆಯ ಎಲ್ಲ ವಕ್ಫ ಸಂಸ್ಥೆಗಳಿಗೆ ಅನುಕೂಲಕರವಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಇತರ ಜಿಲ್ಲಾಡಳಿತದ ಕಚೇರಿಯಿಂದ ಆಗಬೇಕಾದ ಕಾರ್ಯಗಳಿಗಾಗಿ ಬರುವ ಜನರು ವಕ್ಫ ಕಚೇರಿಯ ಕಾರ್ಯವನ್ನೂ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ನಗರದ ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ಯಾವುದೇ ಕಟ್ಟಡದಲ್ಲಿ ಜಿಲ್ಲಾ ವಕ್ಫ ಕಚೇರಿಗೆ ಜಾಗ ಕಲ್ಪಿಸಿ ಕೊಡಬೇಕು. ಶಿರಸಿಗೆ ಸ್ಥಳಾಂತರವಾದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೇ ಹೋರಾಟ ನಡೆಸಲಾಗುವುದು ಎಂದು ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಮನವಿ ಸಲ್ಲಿಸುವ ನಿಯೋಗದಲ್ಲಿ ಬಾಬು ಶೇಖ್, ಕಾಶಿಮ್ ಶೇಖ್ ಉಸ್ಮಾನ್ ಮುಲ್ಲಾ, ಇಮ್ತಿಯಾಜ್ ಬುಕರಿ, ಇಕ್ಬಾಲ್ ಸೈಯದ್, ಮುಜ್ಮಮಿಲ್ ಮಾಡ್ಲಿಂಕ್, ಮುರಾದ್ ಶೇಖ್ ಹಾಗೂ ಇನ್ನಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News