×
Ad

ಮೂರನೇ ಮಹಡಿಯಿಂದ ಬಿದ್ದ 18 ತಿಂಗಳ ಮಗು !

Update: 2017-05-03 13:47 IST

ಮುಂಬೈ, ಮೇ 3: ವಸಾಯ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದ 18 ತಿಂಗಳ ಹೆಣ್ಣು ಮಗು ಪವಾಡಸದೃಶವಾಗಿ ಅಲ್ಪ ಗಾಯಗಳೊಂದಿಗೆ ಪಾರಾಗಿದ್ದಾಳೆ.

ಘಟನೆ ಮಂಗಳವಾರ ನಡೆದಿದ್ದು, ಬಾಲ್ಕನಿಯಲ್ಲಿ ಆಟವಾಡಿಕೊಂಡಿದ್ದ ಮಗು ಕಿಟಿಕಿಯ ಗ್ರಿಲ್ ಗಳ ಎಡೆಯಲ್ಲಿನ ಸಂದಿನಿಂದ ಕೆಳಕ್ಕೆ ಜಾರಿ ಎರಡನೇ ಮಹಡಿಯ ದಂಡೆಗೆ ಬಿದ್ದಿದೆ. ಮನೆಯವರಿಗೆ ಮಗುವನ್ನು ಮೇಲಕ್ಕೆತ್ತಲು ಸಾಧ್ಯವಾಗದೇ ಇದ್ದಾಗ ಅಗ್ನಿಶಾಮಕ ದಳ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದು, ಆಕೆಗೆ ಅಲ್ಪಸ್ವಲ್ಪ ಗಾಯಗಳಾಗಿತ್ತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಕೆ ಲವಲವಿಕೆಯಿಂದಿದ್ದಾಳೆ. ಮಗುವಿನ ತಂದೆ ಅಗ್ನಿಶಾಮಕ ಸಿಬ್ಬಂದಿಯೇ ಆಗಿದ್ದರೂ ಈ ಸಂದರ್ಭ ಆತ ಮನೆಯಲ್ಲಿರಲಿಲ್ಲ.

ಮಗುವಿನ ಹೆತ್ತವರಾದ ಚೇತನ್ ಸಾವಂತ್ ಹಾಗೂ ಸ್ನೇಹಲ್ ಪಾಲ್ಘರ್ ಇಲ್ಲಿನ ಅಂಬಿಸ್ಟೆ ಎಂಬ ಗ್ರಾಮದವರಾಗಿದ್ದು, ಸಂಬಂಧಿ ವಸಾಯ್ ನಿವಾಸಿ ಅರ್ಚನಾ ಪಟೇಲ್ ಅವರ ನಿವಾಸಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿತ್ತು. ಕಿಟಿಕಿಯ ಗ್ರಿಲ್ ತುಕ್ಕು ಹಿಡಿದಿದ್ದರಿಂದ ಅಲ್ಲಿನ ಸಂದು ದೊಡ್ಡದಾಗಿದ್ದು ಮಗು ಕೆಳಕ್ಕೆ ಜಾರಿ ಬಿದ್ದಿದ್ದಳು. ಆಕೆಯ ಅಳು ಕೇಳಿ ಓಡಿ ಬಂದ ತಾಯಿ ಮಗು ಕೆಳಕ್ಕೆ ಬಿದ್ದಿರುವುದನ್ನು ನೋಡಿ ಹೌಹಾರಿ ಪತಿಗೆ ಫೋನ್ ಮಾಡಿದ್ದಳು. ಆತ ತನ್ನ ಸಹೋದ್ಯೋಗಿಗಳನ್ನು ಸ್ಥಳಕ್ಕೆ ಕಳುಹಿಸಿದ ಪರಿಣಾಮ ಅವರು ಎರಡನೇ ಮಹಡಿಯ ಕಿಟಿಕಿಯೊಂದರ ಮುಖಾಂತರ ಮಗುವನ್ನು ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News