ಈಜಿಪ್ಟ್ ನ ತೂಕದ ಮಹಿಳೆ ಭಾರತಕ್ಕೆ ನಾಳೆ ವಿದಾಯ
ಮುಂಬೈ, ಮೇ 3: ಜಗತ್ತಿನ ಅತ್ಯಂತ ತೂಕದ ಮಹಿಳೆ ಖ್ಯಾತಿಯ ಈಜಿಪ್ಟ್ ನ ಮಹಿಳೆ ಎಮಾನ್ ಅಹ್ಮದ್ ಅವರಿಗೆ ಭಾರತದಲ್ಲಿ 81 ದಿನಗಳ ಚಿಕಿತ್ಸೆಯ ಬಳಿಕ ದುಬೈಗೆ ಹೆಚ್ಚಿನ ಚಿಕಿತ್ಸೆಗೆ ತೆರಳಲು ಸಿದ್ಧತೆ ಮಾಡಲಾಗಿದೆ. ಗುರುವಾರ ಬೆಳಗ್ಗೆ 10:30ಕ್ಕೆ ಮುಂಬೈನ ಸೈಫೀ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
"ಎಮಾನ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವಿಮಾನದಲ್ಲಿ ತೆರಳುವುದಕ್ಕೆ ಶಕ್ತರಾಗಿದ್ದಾರೆ” ಎಂದು ಮುಂದೆ ಚಿಕಿತ್ಸೆಯನ್ನು ಮುಂದುವರಿಸಲಿರುವ ವಿಪಿಎಸ್ ಬುರ್ಜಿಲ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. ದುಬೈನ ವಿಪಿಎಸ್ ಬುರ್ಜಿಲ್ ಆಸ್ಪತ್ರೆಯಲ್ಲಿ ಎಮಾನ್‌ಗೆ ಚಿಕಿತ್ಸೆ ಮುಂದುವರಿಸಲು ತಯಾರಿ ನಡೆಸಲಾಗಿದೆ.
ಎಮಾನ್ ಅಹ್ಮದ್ ಚಿಕಿತ್ಸೆ ಪಡೆಯುತ್ತಿರುವ ಮುಂಬೈನ ಸೈಫೀ ಆಸ್ಪತ್ರೆಗೆ ಇಂದು ಭೇಟಿ ನೀಡಿರುವ ವಿಪಿಎಸ್ ಬುರ್ಜಿಲ್ ಆಸ್ಪತ್ರೆಯ ವೈದ್ಯರ ತಂಡಕ್ಕೆ ಸೈಫೀ ಆಸ್ಪತ್ರೆ ವೈದ್ಯರು ಎಮಾನ್ ಅಹ್ಮದ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
36 ವರ್ಷದ ಎಮಾನ್‌ಗೆ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲು ಸೈಫೀ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಸುಸಜ್ಜಿತ ಆಂಬುಲೆನ್ಸ್ ಸಿದ್ಧವಾಗಿದೆ. ಎಮಾನ್ ನನ್ನು ಕರೆದೊಯ್ಯಲು ಇಟಲಿಯಿಂದ ವಿಶೇಷ ಹೈಡ್ರೋಲಿಕ್ ಸ್ಟ್ರೇಚರ‍್ ನ್ನು ತರಿಸಲಾಗಿದೆ.
ತೂಕ ಇಳಿಸುವ ಶಸ್ತ್ರಚಿಕಿತ್ಸೆಗಾಗಿ ಫೆ.11ರಂದು ಎಮಾನ್ ಅಹ್ಮದ್ ಭಾರತಕ್ಕೆ ಆಗಮಿಸಿ ಮುಂಬೈನ ಸೈಫೀ ಆಸ್ಪತ್ರೆಗೆ ದಾಖಲಾಗಿದ್ದರು. 500ಕೆ.ಜಿ. ತೂಕ ಹೊಂದಿದ್ದ ಎಮಾನ್ ಅಹ್ಮದ್ ಅವರ ದೇಹದ ಭಾರ ಇಳಿಸುವ ಶಸ್ತ್ರಚಿಕಿತ್ಸೆಯನ್ನು ಮುಂಬೈನ ಸೈಫಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದರು. ಈಗ ಆಕೆಯ ತೂಕ ಕೇವಲ 176 ಕೆಜಿ. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ 300 ಕೆಜಿಗೂ ಅಧಿಕ ತೂಕ ಕಳೆದುಕೊಂಡಿದ್ದಾರೆ.
ಎಮಾನ್ ಅಹ್ಮದ್ ಗೆ ಸೈಫೀ ಆಸ್ಪತ್ರೆಯ ಡಾ.ಮುಫಜಲ್ ಅವರ ನೇತೃತ್ವದಲ್ಲಿ ಮಾರ್ಚ್ 7 ರಂದು ಬ್ಯಾರಿಯಾಟ್ರಿಕ್ ಸರ್ಜರಿ ಮಾಡಲಾಗಿತ್ತು.
ಇತ್ತೀಚೆಗೆ ಎಮಾನ್ ಅ ತೂಕ ಇಳಿಕೆ ಬಗ್ಗೆ ವೈದ್ಯರು ಸುಳ್ಳು ಹೇಳುತ್ತಿದ್ದಾರೆ ಎಂದು ಆಕೆಯ ಸಹೋದರಿ ಆರೋಪಿಸಿ ಹೊಸ ವಿವಾದವನ್ನುಂಟು ಮಾಡಿದ್ದರು.