ರಾಮ ಮಂದಿರ ನಿರ್ಮಾಣಕ್ಕೆ ಹೊರಟ ಮುಸ್ಲಿಮರಿಗೆ ಮಂಗಳಾರತಿ

Update: 2017-05-03 10:31 GMT

ಹರಿದ್ವಾರ,ಮೇ 3: ಇಲ್ಲಿಯ ಅರ್ಚಕರ ಸಂಘಗಳಾದ ಬ್ರಾಹ್ಮಣ ಸಭಾ ಮತ್ತು ಅಖಿಲ ಭಾರತೀಯ ಯುವ ತೀರ್ಥ ಪುರೋಹಿತ ಮಹಾಸಭಾ ಆಕ್ಷೇಪಣೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಮುಸ್ಲಿಂ ಘಟಕ ‘ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ)’ ನಗರದಲ್ಲಿ ಮೇ 5-6ರಂದು ಹಮ್ಮಿಕೊಂಡಿದ್ದ ಸಮಾವೇಶವನ್ನು ಇಲ್ಲಿಂದ 20 ಕಿ.ಮೀ.ದೂರದ ಪಿರಣ್ ಕಳಿಯಾರ್‌ಗೆ ಎತ್ತಂಗಡಿ ಮಾಡಲಾಗಿದೆ.

ರಾಮ ಮಂದಿರ ಮತ್ತು ತ್ರಿವಳಿ ತಲಾಖ್ ಕುರಿತಂತೆ ಮುಸ್ಲಿಮರಲ್ಲಿ ಒಮ್ಮತವನ್ನು ಮೂಡಿಸುವ ಉದ್ದೇಶದಿಂದ ಹರ್-ಕಿ-ಪೌಡಿ ಘಾಟ್‌ನಿಂದ ಕಲ್ಲೆಸೆತದ ದೂರದಲ್ಲಿರುವ ನಿಷ್ಕಾಮ ಸೇವಾ ಟ್ರಸ್ಟ್‌ನ ಆವರಣದಲ್ಲಿ ಎಂಆರ್‌ಎಂ ಈ ಸಮಾವೇಶವನ್ನು ಏರ್ಪಡಿಸಿತ್ತು.

 ಕೆಲವು ವರ್ಷಗಳ ಹಿಂದಿನವರೆಗೂ ನಗರಸಭೆಯಾಗಿದ್ದ ಹರಿದ್ವಾರ ನಗರ ಪಾಲಿಕೆಯ ನಿಯಮಾವಳಿಗಳಲ್ಲಿ ‘‘ನಗರದ ಮುನ್ಸಿಪಲ್ ವ್ಯಾಪ್ತಿಯಲ್ಲಿ ಹಿಂದುಯೇತರರ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದಿಲ್ಲ ’’ಎಂಬ ಬ್ರಿಟಿಷರ ಕಾಲದ ನಿಬಂಧನೆಯನ್ನು ಸ್ಥಳೀಯ ಅರ್ಚಕರು ಎಂರ್‌ಎಂ ಗಮನಕ್ಕೆ ತಂದಿದ್ದರು ಎಂದು ಮೂಲಗಳು ತಿಳಿಸಿವೆ.

ಪೂರ್ವ ನಿಗದಿತ ಸ್ಥಳದಲ್ಲಿಯೇ ಸಮಾವೇಶವನ್ನು ನಡೆಸಿದರೆ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ಅರ್ಚಕರು ಎಂಆರ್‌ಎಂಗೆ ಎಚ್ಚರಿಕೆಯನ್ನೂ ನೀಡಿದ್ದರು.

ಉದ್ದೇಶಿತ ಸಮಾವೇಶವು ನಗರ ಪಾಲಿಕೆಯ ನಿಯಮಾವಳಿಗಳು ಮತ್ತು ಈ ಪವಿತ್ರ ನಗರದ ಧಾರ್ಮಿಕ ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪುರೋಹಿತ ಮಹಾಸಭಾದ ಅಧ್ಯಕ್ಷ ಉಜ್ವಲ್ ಪಂಡಿತ್ ಅವರು ಆರೆಸ್ಸೆಸ್ ಪ್ರಾಂತ ಪ್ರಚಾರಕ ಯುದ್ಧವೀರ ಸಿಂಗ್ ಅವರಿಗೆ ಪತ್ರವನ್ನೂ ಬರೆದಿದ್ದರು.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂಆರ್‌ಎಂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗಿರೀಶ್ ಜುಯಲ್ ಅವರು, ಸಮಾವೇಶದ ತಾಣವನ್ನು ಬದಲಿಸಲಾಗುತ್ತಿದೆ ಎಂದು ತಿಳಿಸಿದರು. ಪೂರ್ವ ನಿಗದಿಯಂತೆ ಎಂಆರ್‌ಎಂ ರಾಷ್ಟ್ರೀಯ ಸಂಚಾಲಕ ಇಂದ್ರೇಶ ಕುಮಾರ್ ಅವರು ನಿಷ್ಕಾಮ ಸೇವಾ ಟ್ರಸ್ಟ್‌ನಲ್ಲಿ ಗಂಗಾ ಶುದ್ಧೀಕರಣ, ರಾಮ ಮಂದಿರ ಮತ್ತು ಇತರ ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಸುಮಾರು 150 ಮುಸ್ಲಿಂ ವೌಲ್ವಿಗಳು ಮತ್ತು ಇತರ ಸಾಮಾಜಿಕ ನಾಯಕರೊಂದಿಗೆ ಚರ್ಚಿಸಲಿದ್ದರು ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಲು ಸುಮಾರು 850 ಎಂಆರ್‌ಎಂ ಪದಾಧಿಕಾರಿಗಳ ಸಭೆಯನ್ನು ಪಿರಣ್ ಕಳಿಯಾರ್‌ನಲ್ಲಿ ಏರ್ಪಡಿಸಲಾಗಿತ್ತು ಈಗ ಈ ಎರಡೂ ಕಾರ್ಯಕ್ರಮಗಳು ಪಿರಣ್ ಕಳಿಯಾರ್‌ನಲ್ಲಿಯೇ ನಡೆಯಲಿವೆ ಎಂದೂ ಅವರು ಹೇಳಿದರು.

 ಇದೊಂದು ರಾಷ್ಟ್ರೀಯ ಮಹತ್ವವುಳ್ಳ ಸಭೆಯಾಗಿದ್ದು, ಉದ್ದೇಶಪೂರ್ವಕವಾಗಿ ತಪ್ಪು ತಿಳುವಳಿಕೆಯನ್ನು ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಅವರು, ದೇಶದಲ್ಲಿಯ 29 ರಾಜ್ಯಗಳ 354 ಜಿಲ್ಲೆಗಳಲ್ಲಿ ನಾವು ಶಾಖೆಗಳನ್ನು ಹೊಂದಿದ್ದೇವೆ. ಎಂಆರ್‌ಎಂನ ಎಲ್ಲ ರಾಜ್ಯ ಮತ್ತು ಜಿಲ್ಲಾ ಸಂಚಾಲಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸಾಮಾಜಿಕ ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಲು ಮತ್ತು ಈ ರಾಷ್ಟ್ರೀಯ ವಿಷಯಗಳ ಕುರಿತು ಮುಸ್ಲಿಂ ಸಮುದಾಯದಲ್ಲಿ ಅರಿವು ಮೂಡಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News