ಸರಕಾರಿ ಆದೇಶ ಪಾಲಿಸಲು ಎಂಆರ್‌ಪಿಎಲ್ ನಿರ್ಲಕ್ಷ್ಯ ಆರೋಪ: ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

Update: 2017-05-03 12:38 GMT

ಮಂಗಳೂರು, ಮೇ 3: ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಫಟಕದಿಂದ ಜೋಕಟ್ಟೆ ಭಾಗದಲ್ಲಿ ಮಾಲಿನ್ಯದಿಂದ ಉಂಟಾದ ಅಪಾರ ಹಾನಿಯನ್ನು ತಡೆಗಟ್ಟಲು ರಾಜ್ಯ ಸರಕಾರ ಸೂಚಿಸಿರುವ ಪರಿಹಾರ ಕ್ರಮಗಳ ಆದೇಶವನ್ನು ಪಾಲಿಸುವಲ್ಲಿ ಎಂಆರ್‌ಪಿಎಲ್ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.

ಎಂಆರ್‌ಪಿಎಲ್‌ನ ಪ್ರವೇಶ ದ್ವಾರದ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸ್ಥಳೀಯ ನಾಗರಿಕರ ಹೋರಾಟಕ್ಕೆ ಮಣಿದು ರಾಜ್ಯ ಸರಕಾರ ನೀಡಿರುವ ಆದೇಶವನ್ನು ಪಾಲಿಸದೆ ಕಂಪೆನಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಸರಕಾರದ ಆದೇಶಕ್ಕೆ ಬೆಲೆ ನೀಡದೆ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಕಂಪೆನಿಯ ಇಂತಹ ಅಹಂಕಾರಿ ನಡವಳಿಕೆಯನ್ನು ಜನತೆ ಸಹಿಸುವುದಿಲ್ಲ. ಸರಕಾರಿ ಆದೇಶ ಪಾಲಿಸಲಾಗದಿದ್ದಲ್ಲಿ ಎಂಆರ್‌ಪಿಎಲ್ ಜಿಲ್ಲೆ ಬಿಟ್ಟು ತೊಲಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನಡೆಸಿದ ನಿರಂತರ ಹೋರಾಟದ ಫಲವಾಗಿ 2016 ರ ಫೆಬ್ರವರಿಯಲ್ಲಿ ಗ್ರೀನ್ ಬೆಲ್ಟ್ ನಿರ್ಮಾಣ, ಕೋಕ್ ಸೈಲೋ ಸ್ಥಳಾಂತರ, ಶಬ್ದ ಮಾಲಿನ್ಯಕ್ಕೆ ತಡೆ, ಹೊಸ ಇಟಿಪಿ ಪ್ಲಾಂಟ್ ರಚನೆ ಸೇರಿದಂತೆ ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ರಾಜ್ಯ ಸರಕಾರ ಎಂಆರ್‌ಪಿಎಲ್‌ಗೆ ಆದೇಶ ನೀಡಿತ್ತು. ಕಂಪೆನಿಯು ಸರಕಾರಿ ಆದೇಶ ಪಾಲಿಸುವುದಾಗಿ ಮಾತುಕೊಟ್ಟ ಹಿನ್ನಲೆಯಲ್ಲಿ ಜೋಕಟ್ಟೆ ನಾಗರಿಕರು ಹೋರಾಟ ಕೈಬಿಟ್ಟಿದ್ದರು. ಆದರೆ ಕಾಲಮಿತಿ ದಾಟಿದರೂ ಕಂಪೆನಿ ಯಾವುದೇ ಪರಿಹಾರ ಕೈಗೊಂಡಿಲ್ಲ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು ಆಕ್ಷೇಪಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ತಾಪಂ ಸದಸ್ಯ ಬಿ.ಎಸ್.ಬಶೀರ್, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಗ್ರಾಪಂ ಸದಸ್ಯ ಮೊಯ್ದೀನ್ ಶರೀಫ್ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷ ಸಂಶುದ್ದೀನ್, ಸದಸ್ಯರಾದ ಆಬೂಬಕ್ಕರ್ ಬಾವಾ, ಹೋರಾಟ ಸಮಿತಿಯ ಮುಖಂಡರಾದ ಸಿಲ್ವಿಯಾ, ಸಿದ್ದೀಕ್ ಜೋಕಟ್ಟೆ, ಸೀತರಾಮ ಆಚಾರ್ಯ, ಇಕ್ಬಾಲ್ ಜೋಕಟ್ಟೆ, ಭವಾನಿ ಜೋಕಟ್ಟೆ, ಚಂದ್ರಶೇಖರ್, ದೊಂಬಯ್ಯ, ಮಯ್ಯದ್ದಿ ಜಮಾತ್, ಮಕ್ಸೂದ್ ಕಾನಾ, ಅಜ್ಮಾಲ್ ಕಾನಾ ಮುಂತಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News