ಮಾವಿನಕುರ್ವೆ: ಕುಡಿಯುವ ನೀರಿನ ಯೋಜನೆ ಉದ್ಘಾಟನೆ

Update: 2017-05-03 13:02 GMT

ಭಟ್ಕಳ, ಮೇ 3 : ಜಿಲ್ಲಾ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಮಾವಿನಕುರ್ವೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವ ಕುರಿತು ನೀಡಿದ್ದ ಭರವಸೆ ಈಗ ಸಂಪೂರ್ಣವಾಗಿದೆಯೆನ್ನುವ ತೃಪ್ತಿ ಇದೆ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.

ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕಡವಿನಕಟ್ಟಾ ಡ್ಯಾಂನಿಂದ ಮಾವಿನಕುರ್ವೆ ಗ್ರಾಮ ಪಂಚಾಯತಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಪ್ರಥಮವಾಗಿ ಬೇಕಾಗಿರುವುದು ನೀರು. ನೀರಿಲ್ಲದಿದ್ದರೇ ಬೇರೆ ಯಾವುದೇ ಭಾಗ್ಯ ಮುಖ್ಯವಾದುದಲ್ಲ. ಮಾವಿನಕುರ್ವೆ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ನೀರಿದ್ದರೂ ಕೂಡಾ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ. ಹಾಗಾಗಿ ಇಲ್ಲಿಗೆ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯೊಂದನ್ನು ಮಾಡಬೇಕೆನ್ನುವ ಆಸೆ ಇಂದು ಈಡೇರಿದ ತೃಪ್ತಿ ಇದೆ. ವರ್ಷದ 365 ದಿನವೂ ಕೂಡಾ ಇಲ್ಲಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಸಂಪರ್ಕ ಬೇಕಾದವರು ಗ್ರಾಮ ಪಂಚಾಯಿತಿಗೆ ಹಣ ಪಾವತಿಸಿ ಪಡೆಯಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ನಾಯ್ಕಾ ಮಾತನಾಡಿ, ಹಿರಿಯರಾದ ವಸಂತ ಖಾರ್ವಿ ಮಂಕಾಳ ವೈದ್ಯ ಅವರು ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಿಂತ ಹೆಚ್ಚಿನ ಕೆಲಸವನ್ನು ಈ ಭಾಗಕ್ಕೆ ನೀಡಿದ್ದಾರೆ. ಕೊಂಕಣ ಖಾರ್ವಿ ಸಮಾಜದ ವತಿಯಿಂದ ಕುಡಿಯುವ ನೀರಿನ ಕುರಿತು ಅನೇಕ ಬಾರಿ ಬೇಡಿಕೆ ಸಲ್ಲಿಸಲಾಗಿತ್ತು. ಶಾಸಕರ ಮುತುವರ್ಜಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದನ್ನು ಶ್ಲಾಘಿಸಿದರು.

ಮಾವಿನಕುರ್ವೆ ಬಂದರಿನಲ್ಲಿ ಬಹು ಮುಖ್ಯವಾಗಿ ಬ್ರೇಕ್ ವಾಟರ್ ಕಾಮಗಾರಿ ಆಗಲೇಬೇಕಾಗಿದೆ. ಮಾವಿನಕುರ್ವೆ ಬಂದರನ್ನು ಮೀನುಗಾರಿಕಾ ಬಂದರನ್ನಾಗಿ ಮಾಡುವುದು, 5 ಕೋಟಿ ರೂಪಾಯಿ ವೆಚ್ಚದಲ್ಲಿ ಧಕ್ಕೆ ಅಭಿವೃದ್ಧಿ, ಬೆಳ್ನಿ ಭಾಗದಲ್ಲಿ 3 ಕೋಟಿ ವೆಚ್ಚದಲ್ಲಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ಈ ಭಾಗದ ಜನತೆಯ ಬೇಡಿಕೆ ಪ್ರಥಮವಾಗಿ ಕುಡಿಯುವ ನೀರಿನದ್ದಾಗಿತ್ತು. ಶಾಸಕರ ಸತತ ಪ್ರಯತ್ನದಿಂದ ಕುಡಿಯುವ ನೀರಿನ ಯೋಜನೆ ಜಾರಿಯಾಗಿದ್ದು ಈ ಭಾಗದ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಖಾರ್ವಿ ಸಮಾಜದ ಪ್ರಮುಖರಾದ ನಾರಾಯಣ ಖಾರ್ವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ಹೊನ್ನಪ್ಪನಾಯ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಖಾರ್ವಿ, ತಾ.ಪಂ.ಸದಸ್ಯ ಈಶ್ವರ ನಾಯ್ಕ, ಹಾಲಿ ಪ.ಪಂ. ಅಧ್ಯಕ್ಷ ಅಬ್ದುರ್ ರಹೀಂ ಶೇಖ್, ಜಿ.ಪಂ. ಇಂಜಿನಿಯರ್ ಪಯಾಜ್ ಅಹಮ್ಮದ್, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ ರಾಘವೇಂದ್ರ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News