×
Ad

ಗಿನ್ನೆಸ್ ದಾಖಲೆಯ ಸ್ಕೂಬಾ ಡೈವಿಂಗ್‌ ತಂಡದಲ್ಲಿ ಕರಾವಳಿಯ ಅಪ್ಪ-ಮಗಳ ಜೋಡಿಯ ಮೋಡಿ

Update: 2017-05-03 19:06 IST

ಮಂಗಳೂರು, ಮೇ 3: ಥಾಯ್ಲೆಂಡ್‌ನ ಕೊಹ್ ತಾವೊನಲ್ಲಿ ಸಮುದ್ರದಾಳದಲ್ಲಿ ಮಾನವ ಸರಪಳಿಯ ಮೂಲಕ ಮಹಾರಾಷ್ಟ್ರ ಪುಣೆಯ ಕ್ರಿಸಾಲಿಸ್ ಎಂಟರ್‌ಪ್ರನರ್ ಫೋರಂ (ಭಾರತ) ತಂಡವು ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿ ಭಾರತದ ಹೆಸರನ್ನು ವಿಶ್ವದಗಲಕ್ಕೆ ಪಸರಿಸಿತ್ತು. ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದ ಪುಣೆಯ ತಂಡದಲ್ಲಿದ್ದ 182 ಮಂದಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಬ್ಯಾರಿ ಸಮುದಾಯದ ಅಪ್ಪ ಮಗಳ ಜೋಡಿಯೂ ಸೇರಿರುವುದು ಜಿಲ್ಲೆ ಹಾಗೂ ಕರ್ನಾಟಕದ ಪಾಲಿಗೆ ಹೆಮ್ಮೆಯ ಸಂಗತಿ.

ಕಾರ್ಕಳ ನಿವಾಸಿ ಪ್ರಸ್ತುತ ಪುಣೆಯಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಹಾಗೂ ಅವರ ಪುತ್ರಿ ಆಯಿಷಾ ಹಿಬಾ (14 ವರ್ಷ) 2016ರ ಡಿಸೆಂಬರ್ 27ರಂದು ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾದ ಸಮುದ್ರದಾಳದಲ್ಲಿ ಮಾನವ ಸರಪಳಿ ರಚಿಸಿದ ತಂಡದ ಸದಸ್ಯರು.

ಅಪ್ಪನ ದಾಖಲೆಯನ್ನು ಮುರಿಯುವಾಸೆ!: 

ಮೂಲತ: ಕಾರ್ಕಳ ನಿವಾಸಿಯಾಗಿರುವ ಅಬ್ದುಲ್ ಹಮೀದ್ ಪುಣೆಯಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಹವ್ಯಾಸಕ್ಕಾಗಿ ಸ್ಕೈ ಡೈವಿಂಗ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2014ರಲ್ಲಿ ಹಮೀದ್‌ರವರನ್ನು ಒಳಗೊಂಡ 34 ಜನರ ಸ್ಕೈ ಡೈವರ್‌ಗಳ ತಂಡವು ಹಿಂದಿನ 28 ಮಂದಿ ಸ್ಕೈ ಡೈವರ್‌ಗಳ ತಂಡದ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ತಂದೆಯಂತೆ ಮಗಳು ಆಯಿಷಾ ಹಿಬಾ ಕೂಡಾ ಕೂಡಾ ಸ್ಕೈ ಡೈವಿಂಗ್ ಹಾಗೂ ಸ್ಕೂಬಾ ಡೈವಿಂಗ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಓದು, ಸಾಹಿತ್ಯದ ಜತೆ ಸ್ಕೈ ಡೈವಿಂಗ್ ಸಾಹಸದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಆಯಿಷಾಗೆ ಸ್ಕೈ ಡೈವಿಂಗ್‌ನಲ್ಲಿನ ತಮ್ಮ ತಂದೆಯ ದಾಖಲೆಯನ್ನು ಮುರಿಯಬೇಕೆಂಬ ಆಸೆ ಇದೆಯಂತೆ.

‘‘ಈಜು ಎಂದರೆ ತುಂಬಾ ಇಷ್ಟ. ಸ್ಕೂಬಾ ಹಾಗೂ ಸ್ಕೈ ಡೈವಿಂಗ್‌ಗೆ ನನಗೆ ನನ್ನ ತಂದೆಯೇ ಪ್ರೇರಣೆ. ತಾಯಿಯ ಪ್ರೋತ್ಸಾಹದಿಂದಾಗಿ ನಾನೂ ತಂದೆಯ ಜತೆ ಸ್ಕೂಬಾ ಡೈವಿಂಗ್‌ನಲ್ಲಿ ಭಾಗವಹಿಸಲು ಕಾರಣವಾಯಿತು. ಈ ಭಾಗವಹಿಸುವಿಕೆ ಮುಖ್ಯವಾಗಿ ತಂಡದ ಶ್ರಮವನ್ನು ಕಲಿಸಿಕೊಟ್ಟಿದೆ’’ ಎಂದು ಹೇಳುತ್ತಾರೆ 14ರ ಹರೆಯದ ಆಯಿಷಾ.

‘‘15 ಅಡಿ ಆಳದ ಸಮುದ್ರದ ಉಪ್ಪು ನೀರಿನಲ್ಲಿ ಒಂದು ಗಂಟೆ ಕಾಲ ತಂಡದ ಎಲ್ಲರೂ ಗಿನ್ನೆಸ್ ದಾಖಲೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಮುದ್ರದ ನೀರಿನಲ್ಲಿ ಕಟ್ಟಿರುವ ಹಗ್ಗವನ್ನು ತಂಡದ ಎಲ್ಲರೂ ಏಕಪ್ರಕಾರದಲ್ಲಿ ಹಿಡಿದು ನೀರಿನೊಳಗೆ ಈಜುವ ಸ್ಥಿತಿಯಲ್ಲಿರಬೇಕಾಗುತ್ತದೆ. ಯಾರೊಬ್ಬರು ಒಂದಿನಿತು ತಪ್ಪಿದರೂ ದಾಖಲೆ ಮುರಿಯುವುದು ಕನಸಿನ ಮಾತು. ಹಾಗಾಗಿ ಇದರಲ್ಲಿ ಒಗ್ಗಟ್ಟು ಪ್ರದರ್ಶನ ಅತ್ಯಗತ್ಯ. ಅದೆಲ್ಲವನ್ನೂ ನಮ್ಮ ತಂಡ ಅಚ್ಚುಕಟ್ಟಾಗಿ ನಿರ್ವಹಿಸಿತು’’ಎನ್ನುತ್ತಾರೆ ಆಯಿಷಾ.

ಅವಿಭಜಿತ ದ.ಕ. ಜಿಲ್ಲೆಯ ಅದರಲ್ಲೂ ಬ್ಯಾರಿ ಸಮುದಾಯದ ಅಪ್ಪ ಮಗಳ ಈ ಸಾಹಸವನ್ನು ರಾಜ್ಯದ ಬ್ಯಾರಿ ಸಾಹಿತ್ಯ ಅಕಾಡಮಿ ಗುರುತಿಸಿ ಮೇ 3ರಂದು ಸನ್ಮಾನಿಸಿತ್ತು.

15 ಅಡಿ ಆಳದ ನೀರಿನಲ್ಲಿ ವಿಶ್ವದಾಖಲೆ

ಪುಣೆಯ ಉದ್ಯಮಿಗಳ ತಂಡವು ತನ್ನ ಪ್ರಥಮ ಪ್ರಯತ್ನದಲ್ಲೇ ಥಾಯ್ಲೆಂಡ್‌ನ ಕೊಹತಾವೊದ ಸಮುದ್ರದ ಸುಮಾರು 15 ಅಡಿ ಆಳದ ನೀರಿನಲ್ಲಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಸಾಮಾನ್ಯ ಜನರೂ ವಿಶ್ವ ದಾಖಲೆಯನ್ನು ನಿರ್ಮಿಸಬಲ್ಲರು ಎಂಬುದನ್ನು ಈ ತಂಡವು ಸಾಬೀತು ಪಡಿಸಿತ್ತು. ಈ ತಂಡದಲ್ಲಿ 9 ವರ್ಷದಿಂದ 60 ವರ್ಷ ಪ್ರಾಯದ ಪುಣೆಯ ನಿವಾಸಿಗಳು ಭಾಗವಹಿಸಿದ್ದರು.

ಅಂದ ಹಾಗೆ, ಈ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸುವ ಸಲುವಾಗಿ ಪುಣೆಯ ಕ್ರಿಸಾಲಿಸ್ ಎಂಟರ್‌ಪ್ರನರ್ ಫೋರಂನ ವತಿಯಿಂದ 204 ಮಂದಿ ಥಾಯ್ಲೆಂಡ್‌ಗೆ ಪ್ರಯಾಣಿಸಿದ್ದರು. ಆದರೆ ಹಿಂದಿನ ದಿನ ಕೊಹ್‌ತಾವೊದ ಸಮುದ್ರದ ನೀರಿನ ಅಬ್ಬರದ ಏರಿಳಿತವನ್ನು ಕಂಡ ಕೆಲವರು ನೀರಿನಲ್ಲಿ ಸುಮಾರು 1 ಗಂಟೆ ಕಾಲ ಮುಳುಗಿ ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿದ್ದರು. ಈ ತಂಡದವರಾರೂ ನುರಿತ, ತಜ್ಞ ಈಜುಗಾರರು ಅಲ್ಲ ಎಂಬುದು ವಿಶೇಷ. ಹಾಗಿದ್ದರೂ ತಂಡದ 182 ಮಂದಿ ಒಂದು ಗಂಟೆ ಕಾಲ ಸಮುದ್ರ ನೀರಿನಲ್ಲಿ ಮಾನವ ಸರಪಳಿ(ವಿಶ್ವ ದಾಖಲೆಯಾದ ಮಾನವ ಸರಪಳಿಯ ಅವಧಿ 6 ನಿಮಿಷ 49 ಸೆಕೆಂಡ್‌ಗಳು)ಯನ್ನು ನಿರ್ಮಿಸಿ, ಹಿಂದಿನ ಇಟಲಿಯ ಈಜುಗಾರರ ತಂಡ (173 ಮಂದಿ)ದಿಂದ ಮಾಡಲಾಗಿದ್ದ ಮಾನವ ಸರಪಳಿಯ ದಾಖಲೆಯನ್ನು ಮುರಿದರು.

ಬ್ಯಾರಿ ಸಮುದಾಯಕ್ಕೆ ಸಂದ ಗೌರವ

ಬ್ಯಾರಿ ಸಮುದಾಯದ ಅಪ್ಪ ಮಗಳ ಜೋಡಿ ಗಿನ್ನೆಸ್ ದಾಖಲೆಯ ತಂಡದಲ್ಲಿ ಭಾಗವಹಿಸಿ ದೇಶದ ಹೆಸರನ್ನು ವಿಶ್ವದಲ್ಲಿ ಅಜರಾಮರಗೊಳಿಸಿದೆ. ಇದು ರಾಜ್ಯದ ಜೊತೆಗೆ ಬ್ಯಾರಿ ಸಮುದಾಯಕ್ಕೆ ಸಂದ ಗೌರವ ಎಂದು ಅಖಿಲ ಭಾರತ ಬ್ಯಾರಿ ಪರಿಷತ್‌ನ ಗೌರವಾಧ್ಯಕ್ಷ ಸೂರಲ್ಪಾಡಿ ಅಬ್ದುಲ್ ಮಜೀದ್ ಹಾಗೂ ಕರ್ನಾಟಕ ಮುಸ್ಲಿಂ ಕೋರ್ಡಿನೇಶನ್ ಕಮಿಟಿಯ ಜತೆ ಕಾರ್ಯದರ್ಶಿ ಅಮೀರುದ್ದೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News