ತೋಡಾರು ಯೆನೆಪೊಯ ತಾಂತ್ರಿಕ ಕಾಲೇಜಿನಲ್ಲಿ ಲಿನಿಕ್ಸ್ ಫಾರ್ ಇಂಜಿನಿಯರ್ಸ್ ಕಾರ್ಯಾಗಾರ
ಮೂಡುಬಿದಿರೆ, ಮೇ 3: ಉತ್ತಮ ಎಂಜಿನಿಯರ್ ಎನಿಸಿಕೊಳ್ಳಲು ಕೇವಲ ಪಠ್ಯ ಪುಸ್ತಕದ ಮಾಹಿತಿಯನ್ನು ಮಾತ್ರ ತಿಳಿದುಕೊಂಡರೆ ಸಾಲದು. ಮೊಬೈಲ್, ಕಂಪ್ಯೂಟರ್ ಹಾಗೂ ಸಾಫ್ಟ್ ವೇರ್‌ಗಳ ತಾಂತ್ರಿಕತೆಗಳ ಬಗ್ಗೆಯೂ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು ಎಂದು ಮಣಿಪಾಲ್ ಎಂಐಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ಮನ್‌ಮೋಹನ್ ಕೆ. ಹೇಳಿದರು.
ತೋಡಾರಿನ ಯೆನೆಪೊಯ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾದ ಲಿನಿಕ್ಸ್ ಫಾರ್ ಇಂಜಿನಿಯರ್ಸ್ ಎಂಬ ವಿಷಯದ ಕುರಿತು ಎರಡು ದಿನಗಳ ಕಾಲ ನಡೆಯುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಯೆನೆಪೊಯ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲ್ ಎಂಐಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್‌ಗಳಾದ ನರೇಂದ್ರ ವಿ.ಜಿ., ಅಶ್ವಥ್ ರಾವ್ ಬಿ. ಹಾಗೂ ಐಸಿಟಿ ವಿಭಾಗದ ಪ್ರೊ. ರಾಮಕೃಷ್ಣ ಬಿ., ಯೆನೆಪೊಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಗುರುಪ್ರಸಾದ್, ಐಎಸ್‌ಇ ವಿಭಾಗದ ಮುಖ್ಯಸ್ಥ ಪಾಂಡು ನಾಯಕ್, ಕಾರ್ಯಕ್ರಮದ ಸಂಯೋಜಕ ಮಂಜುನಾಥ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಐಶ್ವರ್ಯ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ದಿಶಾ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ಅತಿಥಿಗಳನ್ನು ಪರಿಚಯಿಸಿದರು. ಮೋಹಿತಾ ವಂದಿಸಿದರು.