×
Ad

‘ಬಾಲಭವನದಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ’

Update: 2017-05-03 22:19 IST

ಉಡುಪಿ, ಮೇ 3: ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸುವ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಹೇಳಿದ್ದಾರೆ.

ಬುಧವಾರ ಉಡುಪಿ ಬಾಲಭವನದಲ್ಲಿ, ಬಾಲಭವನ ಸೊಸೈಟಿ ಬೆಂಗಳೂರು, ಕರ್ನಾಟಕ ಬಾಲ ವಿಕಾಸ ಅಕಾಡಮಿ ಧಾರವಾಡ, ಜಿಲ್ಲಾ ಬಾಲಭವನ ಸಮಿತಿ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಉಡುಪಿ, ತಾಲೂಕು ಬಾಲಭವನ ಸಮಿತಿ ಉಡುಪಿ ತಾಲೂಕು ಹಾಗೂ ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವಾರಾಂತ್ಯದಲ್ಲಿ 2 ದಿನ ಅಗತ್ಯ ತರಬೇತಿಯನ್ನು ಬಾಲಭವನದಲ್ಲಿ ನೀಡಲಾಗುತ್ತಿದೆ. ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ಮಕ್ಕಳ ಸಾಧನೆಯನ್ನು ಗುರುತಿಸಿ ಅಸಾಧಾರಣ ಪ್ರಶಸ್ತಿಯನ್ನು ಇಲಾಖೆ ನೀಡುತ್ತಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿ ಕೊಳ್ಳುತ್ತಿದೆ ಎಂದು ಗ್ರೇಸಿ ಗೋನ್ಸಾಲ್ವಿಸ್ ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಸಾಧಾರಣ ಸಾಧನೆ ತೋರಿದ ಸ್ವರೂಪ್ ಕುಮಾರ್, ಶ್ರೇಯಾ, ಧರಿತ್ರಿರಾವ್, ಸುಶಾಂತ್‌ಗೆ ಜಿಲ್ಲಾ ಮಟ್ಟದ ಅಸಾಧಾರಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ ನಾರಾಯಣ ಮಾತನಾಡಿ, ಮಕ್ಕಳು ಕಲಿಕೆಯ ರಾಯಭಾರಿಗಳಾಗಬೇಕು. ತಾವು ಕಲಿತದ್ದನ್ನು ಮತ್ತೊಬ್ಬರಿಗೂ ತಿಳಿಸಬೇಕು. ಪುಸ್ತಕಗಳನ್ನು ಓದಿ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದರು.

ಧಾರವಾಡ ಬಾಲ ವಿಕಾಸ ಅಕಾಡಮಿ ಸದಸ್ಯ ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿದ್ದರು. 10 ದಿನಗಳ ಬೇಸಿಗೆ ಶಿಬಿರದಲ್ಲಿ 150 ಮಕ್ಕಳು ಭಾಗವಹಿಸಿದ್ದು, ಮಕ್ಕಳಿಗೆ ಚಿತ್ರಕಲೆ, ನೃತ್ಯ, ಸಂಗೀತ, ಕ್ರಾಪ್ಟ್, ಸಮೂಹ ಗಾಯನ, ಯೋಗ ಮತ್ತು ಕರಾಟೆ ತರಬೇತಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್, ಹೇಮಲತಾ ರಾವ್, ಪ್ರಜ್ಞಾ ಮತ್ತು ಬಾಲಭವನದ ಮೇಲ್ವಿಚಾರಕ ಸರ್ವೇಶ್ವರ್ ಉಪಸ್ಥಿತರಿದ್ದರು. ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News