×
Ad

​ಮೇ 6, 7ರಂದು ಕುಕ್ಕಾಜೆಯಲ್ಲಿ ದ. ಭಾರತ ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾಟ

Update: 2017-05-03 23:34 IST

ಬಂಟ್ವಾಳ, ಮೇ 3: ವಲಯ ಕಾಂಗ್ರೆಸ್ ಸಮಿತಿ ಮಂಚಿ, ನವಯುಗ ಸ್ಪೋರ್ಟ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜನ್ಮಶತಾಬ್ಧಿ ಪ್ರಯುಕ್ತ ದಕ್ಷಿಣ ಭಾರತ ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾಟ ಮೇ 6 ಮತ್ತು 7ರಂದು ಎರಡು ದಿನಗಳ ಕಾಲ ಮಂಚಿ ಕುಕ್ಕಾಜೆ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕಬಡ್ಡಿ ಸಂಘಟನಾ ಸಮಿತಿಯ ಅಧ್ಯಕ್ಷ ಎಂ.ಎಸ್.ಮುಹಮ್ಮದ್ ತಿಳಿಸಿದರು.

ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪಂದ್ಯಾಟಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್, ಮೀನುಗಾರಿಕಾ ಸಚಿವ ಪ್ರಮೋದ್ ಮದ್ವರಾಜ್, ಎಐಸಿಸಿ ವಿಭಾಗೀಯ ಸಂಚಾಲಕ ಡಾ. ವಿಷ್ಣುಪ್ರಸಾದ್, ಶಾಸಕರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಐವನ್ ಡಿಸೋಜ, ಶಕುಂತಲಾ ಶೆಟ್ಟಿ, ವಸಂತ ಬಂಗೇರ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ದಿವ್ಯಪ್ರಭಾ ಗೌಡ, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಡಿಸಿಸಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಿಶೇಷ ಅಹ್ವಾನಿತರಾಗಿ ತುಳು ಚಿತ್ರ ನಟರಾದ ದೇವದಾಸ ಕಾಪಿಕಾಡ್, ನವೀನ್ ಡಿ. ಪಡೀಲ್ ಮತ್ತಿತರರು ಭಾಗವಹಿಸಲಿರುವರು ಎಂದು ತಿಳಿಸಿದರು

ಕಬಡ್ಡಿ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಅಲಿ ಮಾತನಾಡಿ, ವಿಜೇತ ತಂಡಕ್ಕೆ ಪ್ರಥಮ ಬಹುಮಾನ 1 ಲಕ್ಷ ರೂ., ದ್ವಿತೀಯ ಬಹುಮಾನ 70 ಸಾವಿರ ರೂ., ತೃತೀಯ ಮತ್ತು ಚತುರ್ಥ 40 ಸಾವಿರ ರೂ. ಹಾಗೂ ಇಂದಿರಾ ಗಾಂಧಿ ಟ್ರೋಫಿ ನೀಡಲಾಗುವುದು. ಭಾರತ ಕಬಡ್ಡಿ ತಂಡವನ್ನು ಪ್ರತಿನಿಧಿಸುವ 15ರಿಂದ 20 ಮಂದಿ ಆಟಗಾರರು ವಿವಿಧ ತಂಡದಲ್ಲಿ ಭಾಗವಹಿಸಲಿದ್ದಾರೆ. ರೈಲ್ವೆ, ಮಿಲಿಟರಿ, ಆಂಧ್ರ, ತಮಿಳುನಾಡು, ಸಹಿತ ಅಹ್ವಾನಿತ ಎಂಟು ತಂಡಗಳು ಈ ಪಂದ್ಯಾಕೂಟದಲ್ಲಿ ಬಾಗವಹಿಸಲಿದೆ. ಒಟ್ಟು 15 ಪಂದ್ಯಾಟ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖ್ಯ ಸಲಹೆಗಾರರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಇಬ್ರಾಹೀಂ ಜಿ.ಎಂ., ಡಿ.ಕೆ.ಹಂಝ, ಹಸೈನಾರ್ ಪಿ.ಕೆ., ಶ್ರೀಪತಿರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News