×
Ad

ಮೇ 19ರಂದು 'ಬಣ್ಣ ಬಣ್ಣದ ಬದುಕು' ಚಲನಚಿತ್ರ ತೆರೆಗೆ

Update: 2017-05-04 12:52 IST

ಮಂಗಳೂರು, ಮೇ 5: ಮುತ್ತುರಾಮ್ ಕ್ರಿಯೇಶನ್ ಕಾರ್ಕಳ ಬ್ಯಾನರ್‌ನಡಿ ಕೃಷ್ಣ ನಾಯ್ಕಾ ಕಾರ್ಕಳರಿಂದ ನಿರ್ಮಾಣವಾಗಿರುವ ಬಣ್ಣ ಬಣ್ಣದ ಬದುಕು ಕನ್ನಡ ಚಲನಚಿತ್ರ ಮೇ 19ರಂದು ತೆರೆ ಕಾಣಲಿದೆ ಎಂದು ಕನ್ನಡದ ಹಿರಿಯ ನಟ ರಮೇಶ್ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕರಾವಳಿಯ ಮಣ್ಣಿನ ಸೊಗಡವನ್ನು ಹೊಂದಿರುವ ಈ ಚಿತ್ರದಲ್ಲಿ ಇಲ್ಲಿನ ವಿಶೇಷ ಕಲೆಯಾದ ಯಕ್ಷಗಾನವನ್ನೇ ಪ್ರಧಾನ ವಸ್ತುವನ್ನಾಗಿಸಲಾಗಿದೆ. ಮೇ 19ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದ್ದು, ಮೇ 28ರಂದು ಮುಂಬೈಯಲ್ಲಿ ತೆರೆ ಕಾಣಲಿದೆ ಎಂದು ಅವರು ಹೇಳಿದರು.

ಇಸ್ಮಾಯಿಲ್ ಮೂಡುಶೆಡ್ಡೆಯವರ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಚಿತ್ರದಲ್ಲಿ ರವಿರಾಜ್ ಶೆಟ್ಟಿ, ಅನ್ವಿತಾ ಸಾಗರ್, ರಿಯಾ ಮೇಘನಾ, ರಮೇಶ್ ಭಟ್, ಸತ್ಯಜಿತ್, ಹೊನ್ನವಳ್ಳಿ ಕೃಷ್ಣ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಮಂಗೇಶ್ ಭಟ್, ರಮೇಶ್ ರೈ ಕುಕ್ಕುವಳ್ಳಿ, ಅಪೂರ್ವಶ್ರೀ ಅಭಿನಯಿಸಿದ್ದಾರೆ. ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಬಲಿಪ ನಾರಾಯಣ ಭಾಗವತರು ಈ ಚಿತ್ರದಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

ಎ.ಕೆ. ವಿಜಯ್ ಕೋಕಿಲಾ ಸಂಗೀತ ನೀಡಿದ್ದು, ಶಶಿರಾಜ್ ಕಾವೂರು, ಸುರೇಶ್ ಆರ್.ಎಸ್. ಸಾಹಿತ್ಯದಲ್ಲಿ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ. ಜಿಲ್ಲೆಯ ತುಳು ಹಾಗೂ ಬ್ಯಾರಿ ರಂಗಭೂಮಿಯ ಕಲಾವಿದರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ ಎಂದು ರಮೇಶ್ ಭಟ್ ನುಡಿದರು.

ಕನ್ನಡ ಹಿರಿಯ ನಟರಾದ ರಮೇಶ್ ಭಟ್‌ರವರು ಚಿತ್ರದಲ್ಲಿ ವಿಷ್ಣುನಾವಡ ಹೆಸರಿನ ಭಾಗವತರ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ ಎಂದು ನಿರ್ದೇಶ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದರು.

ಗೋಷ್ಠಿಯಲ್ಲಿ ನಾಯಕ ನಟ ರವಿರಾಜ್ ಶೆಟಟಿ, ನಾಯಕಿ ಅನ್ವಿತಾ ಸಾಗರ್, ಉದ್ಯಮಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News