ಅಭಯಚಂದ್ರರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ
ಮೂಡುಬಿದಿರೆ, ಮೇ 4: ಶಾಸಕ ಅಭಯಚಂದ್ರ ಜೈನ್ ಅವರನ್ನು 2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯಮಟ್ಟದ ಸಮಿತಿಗೆ ಸಹ ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದ ಸರಕಾರ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನವನ್ನು ನೀಡಿದೆ.
ಸರಕಾರ ಈ ಬಗ್ಗೆ ಆಧಿಸೂಚನೆಯನ್ನು ಹೊರಡಿಸಿದ್ದು, ಅಭಯಚಂದ್ರ ಅವರಿಗೆ ಸಚಿವರಿಗೆ ನೀಡಲಾಗುವ ಸರಕಾರಿ ಕಾರು ನೀಡಲಾಗಿದೆ.
ಈ ಹಿಂದೆ ಯುವಜನ ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಸಚಿವರಾಗಿದ್ದ ಸಂದರ್ಭ ಸರಕಾರದಿಂದ ಯಾವುದೇ ಹೊಸ ಕಾರು ಖರೀದಿಸದೇ ಹಳೆಯ ಕಾರನ್ನೇ ಬಳಸಿ ಮಾದರಿಯೆನಿಸಿದ್ದ ಅವರು ಸಚಿವ ಸ್ಥಾನಮಾನ ಕೈಜಾರಿದ ದಿನವೇ ಸರಕಾರಿ ಕಾರನ್ನು ವಾಪಸ್ ಮಾಡಿದ್ದರು. ಈಗಲೂ ಅವರಿಗೆ ಹೊಸ ಕಾರು ಖರೀದಿಸುವ ಅವಕಾಶವಿದ್ದರು ಮತ್ತೆ ಹಳೆಯ ಕಾರನ್ನೇ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅಭಯಚಂದ್ರ, ಸರಕಾರದ ದುಡ್ಡು ಜನರದ್ದು. ಅದನ್ನು ಸುಮ್ಮನೆ ಪೋಲು ಮಾಡುವುದು ನನಗೆ ಇಷ್ಟವಿಲ್ಲ. ಹೀಗಾಗಿ ಹಳೆಯ ಕಾರನ್ನೇ ಬಳಸುತ್ತಿದ್ದೇನೆ ಎಂದರು.