ಧರ್ಮಸ್ಥಳ: ವಿವಾಹ ನಿಶ್ಚಯವಾಗಿದ್ದ ಯುವಕನ ಕೊಲೆ ಕೃತ್ಯ ಬಯಲಿಗೆ; ಆರು ಮಂದಿಯ ಸೆರೆ
ಬೆಳ್ತಂಗಡಿ, ಮೇ 4: ಧರ್ಮಸ್ಥಳ ಸಮೀಪ ಪಟ್ರಮೆ ರಸ್ತೆಯಲ್ಲಿ ಕೆಲದಿನಗಳ ಹಿಂದೆ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಗುರುತು ಪತ್ತೆಯಾಗಿದ್ದು, ಇದೊಂದು ಕೊಲೆ ಕೃತ್ಯ ಎಂಬುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವಕನನ್ನು ಮಲವಂತಿಗೆ ಗ್ರಾಮದ ನಿವಾಸಿ ಸುರೇಶ್ ನಾಯ್ಕ (29) ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿಯಂತೆ ಪೊಲೀಸ್ ವಶದಲ್ಲಿರುವ ಪ್ರಮುಖ ಆರೋಪಿ ಸುಲ್ಕೇರಿ ನಿವಾಸಿ ಆನಂದ ನಾಯ್ಕ ಎಂಬಾತನಾಗಿದ್ದು, ಈತನೊಂದಿಗೆ ಬೆಳ್ತಂಗಡಿ ಚರ್ಚ್ ರೋಡಿನ ಪ್ರವೀಣ ನಾಯ್ಕ, ಲೋಕೇಶ್ ಮೂಲ್ಯ, ವಿನಯ ಪೂಜಾರಿ ಚಾರ್ಮಾಡಿ, ನಾಗರಾಜ ಮೂಲ್ಯ ಹಾಗೂ ಪ್ರಕಾಶ ನಾಯ್ಕ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ನಾಯ್ಕ ಅವರ ವಿವಾಹವು ಕೆಲ ದಿನಗಳ ಹಿಂದೆ ತಾಲೂಕಿನ ಯುವತಿಯೋರ್ವಳೊಂದಿಗೆ ನಿಶ್ಚಯವಾಗಿತ್ತು ಮದುವೆಗೆ ದಿನವೂ ನಿಗದಿಯಾಗಿತ್ತು. ಈ ನಡುವೆ ಎಪ್ರಿಲ್ 30ರಂದು ಸುರೇಶ ಮನೆಯಿಂದ ಉಜಿರೆಗೆ ಬಂದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಸುಡಲ್ಪಟ್ಟ ರೀತಿಯಲ್ಲಿ ಪತ್ತೆಯಾದ ಮೃತದೇಹವನ್ನು ಪರಿಶೀಲಿಸಿದಾಗ ಇದು ಸುರೇಶ್ ನಾಯ್ಕ ಅವರದ್ದು ಎಂಬುದು ಖಚಿತವಾಗಿದೆ. ಬಳಿಕ ಕೊಲೆ ಪ್ರಕರಣವನ್ನು ಭೇಧಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಭೇಟಿಯಾಗಿ ಬರುತ್ತೇನೆ ಎಂದು ಸುರೇಶ್ ಹೊರಟಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಆತನ ಹಾಗೂ ಆ ಯುವತಿಯ ಮೊಬೈಲ್ ಫೋನ್ ನಂಬರ್‌ಗಳನ್ನು ಪರಿಶೀಲಿಸಿ ನಡೆಸಿದ ತನಿಖೆಯಲ್ಲಿ ಕೊಲೆ ಪ್ರಕರಣ ಬಹಿರಂಗಗೊಂಡಿದೆ. ಮದುವೆ ನಿಶ್ಚಯವಾಗಿದ್ದ ಯುವತಿ ಇದೀಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆನಂದ ನಾಯ್ಕನ ಪ್ರೇಯಸಿಯಾಗಿದ್ದಾಳೆ ಎನ್ನಲಾಗಿದೆ. ಆನಂದ ನಾಯ್ಕ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದಾನೆ. ಆದರೆ ಈತ ಸುರೇಶನ ಮದುವೆ ತಪ್ಪಿಸಲು ಪ್ರಯತ್ನಿಸಿದ್ದ. ಅದು ಸಾಧ್ಯವಾಗದಿದ್ದಾಗ ಸುರೇಶನ ಕೊಲೆಗೆ ಸಂಚು ರೂಪಿಸಿ ಗೆಳೆಯರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಜಿರೆಯಿಂದ ಸುರೇಶನನ್ನು ಉಪಾಯವಾಗಿ ಆರೋಪಿ ಪ್ರವೀಣ್ ನಾಯ್ಕನ ಓಮ್ನಿ ಕಾರಿನಲ್ಲಿ ಕರೆದೊಯ್ದು ಆರೋಪಿಗಳು ಹತ್ಯೆ ಮಾಡಿ ಬಳಿಕ ಧರ್ಮಸ್ಥಳ ಸಮೀಪ ಪಟ್ರಮೆ ರಸ್ತೆಯಲ್ಲಿ ಸುಟ್ಟು ಹಾಕಿದ್ದಾರೆನ್ನಲಾಗಿದೆ. ಮೃತದೇಹದ ಗುರುತು ಸಿಗದಿದ್ದಾಗ ತನಿಖೆಯ ದಿಕ್ಕು ತಪ್ಪಲಿದೆ ಎಂದು ಭಾವಿಸಿ ಇವರು ಈ ತಂತ್ರ ಹೆಣೆದಿದ್ದರು. ಆದರೆ ಪೊಲೀಸರು ನಡೆಸಿದ ಸಮರ್ಪಕ ತನಿಖೆಯಿಂದ ಮೂರೆ ದಿನಗಳಲ್ಲಿ ಎಲ್ಲ ಆರೋಪಿಗಳೂ ಪೊಲೀಸರ ವಶವಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಎಸ್ಸೈ ರಾಮನಾಯ್ಕ, ಬೆಳ್ತಂಗಡಿ ಎಸ್ಸೈ ರವಿ ತನಿಖೆಯ ನೇತೃತ್ವ ವಹಿಸಿದ್ದರು.