×
Ad

ಕೊಲೆ ಪ್ರಕರಣಗಳಿಗೆ ಕೋಮುಬಣ್ಣ ಹಚ್ಚುವ ಬಿಜೆಪಿಯಿಂದ ಕುಟಿಲ ರಾಜಕೀಯ: ಐವನ್ ಡಿಸೋಜ

Update: 2017-05-04 19:57 IST

ಉಳ್ಳಾಲ, ಮೇ 4: ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಿಜೆಪಿಯ ಕೋಮು ರಾಜಕೀಯದ ವಿರುದ್ಧ ಜನಜಾಗೃತಿ ಸಭೆಯು ಗುರುವಾರ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನಡೆಯಿತು.

ವಿಧಾನಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಅಮಾಯಕ ಯುವಕ ಕಾರ್ತಿಕ್‌ರಾಜ್ ಕೊಲೆಯನ್ನು ಕೇರಳ ಶೈಲಿಯ ಜಿಹಾದಿ ಕೊಲೆಯೆಂದು ಬಣ್ಣಿಸಿದ್ದ ಬಿಜೆಪಿಗರು ಜಿಲ್ಲೆಯಲ್ಲಿ ಯಾವುದೇ ಕೊಲೆ ನಡೆದರೂ ಅದಕ್ಕೆ ಇದೇ ರೀತಿ ಬಣ್ಣ ಹಚ್ಚಿ ಕುಟಿಲ ರಾಜಕೀಯ ನಡೆಸುತ್ತಿದ್ದಾರೆಂದು ಹೇಳಿದರು.

ನಾಗರಿಕ ಸಮಾಜದಲ್ಲಿ ಕೊಲೆಗಳಂತಹ ಅಮಾನವೀಯ ಕೃತ್ಯಗಳು ನಡೆದಾಗ ನೈಜ ಅಪರಾಧಿಗಳ ಬಂಧನಕ್ಕೆ ಪೊಲೀಸರಿಗೆ ಸಹಕಾರ ನೀಡುವುದು ಪ್ರತಿಯೊಬ್ಬ ಜವಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ. ಆದರೆ ಬಿಜೆಪಿಗರು ಮಾತ್ರ ಜಿಲ್ಲೆಯಲ್ಲಿ ಯಾವುದೇ ಕೊಲೆಗಳು ನಡೆದರೂ ಅದಕ್ಕೆ ಕೋಮು ಬಣ್ಣವನ್ನು ನೀಡಿ ಜಿಲ್ಲೆಗೆ ಬೆಂಕಿ ಹಚ್ಚುವಂತಹ ಪ್ರತಿಭಟನಾ ಮಾತುಗಳನ್ನಾಡುವುದು ಖಂಡನೀಯ. ಕಾರ್ತಿಕ್‌ರಾಜ್ ಕೊಲೆಯಲ್ಲಿ ತಂಗಿಯ ಕೈವಾಡವಿದೆಯೆಂದು ಗೊತ್ತಿದ್ದರೂ ಸಹ ಸತ್ಯವನ್ನು ಮುಚ್ಚಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ,ಸಂಸದ ನಳಿನ್ ಕುಮಾರ್ ಕಟೀಲು, ಪ್ರಭಾಕರ್ ಭಟ್ ಸೇರಿದಂತೆ ಹಲವು ನಾಯಕರು ಪ್ರಕರಣದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟುವ ಕಾರ್ಯ ನಡೆಸಿದ್ದಾರೆ. ಅವರೆಲ್ಲರೂ ಜಿಲ್ಲೆಯ ಜನತೆಯಲ್ಲಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ತಾಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ ಮಾತನಾಡಿ, ಬಿಜೆಪಿಯ ಜವಾಬ್ದಾರಿಯುತ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರೇ ಮೃತ ಕಾರ್ತಿಕ್‌ರಾಜ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣವನ್ನು ಸೂಕ್ಷ್ಮವಾಗಿ ವಿಮರ್ಶಿಸದೆ "ಇದೊಂದು ಜಿಹಾದಿಗಳು ಮಾಡಿದ ಕೊಲೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು" ಗೃಹಸಚಿವರಿಗೆ ಪತ್ರವನ್ನು ಬರೆದಿದ್ದರು. ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸಬೇಕಾದ ಸಂಸದರು ತಮ್ಮ ಜವಾಬ್ದಾರಿಯನ್ನು ಮರೆತು ಜಿಲ್ಲೆಗೆ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದರು.ಇನ್ನಾದರೂ ಕೊಲೆಗಳಂತಹ ವಿಧ್ವಂಸಕ ಕೃತ್ಯಗಳು ನಡೆದಲ್ಲಿ ಬಿಜೆಪಿಯು ಕೋಮುವಾದಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿಪಂ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ತಾಪಂ ಸದಸ್ಯರಾದ ಸಿದ್ದೀಕ್ ಕೊಳಂಗೆರೆ, ಸುರೇಖಾ ಚಂದ್ರಹಾಸ್, ಪದ್ಮಾವತಿ, , ಉಳ್ಳಾಲ ನಗರ ಪಂಚಾಯತ್ ಅಧ್ಯಕ್ಷ ಹುಸೇನ್ ಕುಂಞಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಫಾರೂಕ್ ಉಳ್ಳಾಲ್, ಮುಖಂಡರಾದ ಎನ್.ಎಸ್ ಕರೀಂ, ಉಮ್ಮರ್ ಪಜೀರು, ನಝರ್ ಷಾ ಪಟ್ಟೋರಿ, ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ರಹಿಮಾನ್ ಕೋಡಿಜಾಲ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News