ರುಂಡ ಬೇರ್ಪಡಿಸಿ ಯುವಕನ ಕೊಲೆ ಪ್ರಕರಣ: 6 ಆರೋಪಿಗಳ ಬಂಧನ

Update: 2017-05-04 15:37 GMT

ಕಾಸರಗೋಡು, ಮೇ 4: ಮೊಗ್ರಾಲ್ ಬಳಿಯ ಪೇರಾಲ್ ನ ಅಬ್ದುಲ್ ಸಲಾಂ (22)ರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬದ್ರಿಯಾ ನಗರದ ಮಾಂಙಮುಡಿ ಸಿದ್ದಿಕ್ (39), ಪೇರಾಲ್  ನ ಉಮ್ಮರ್ ಫಾರೂಕ್ ಕೆ.ಎಸ್ (29), ಪೆರುವಾಡ್ ನ ಸಹೀರ್ (32), ಪೇರಾಲ್‌ನ ನಿಯಾಝ್ (31), ಬಂಬ್ರಾಣ ಆರಿಕ್ಕಾಡಿಯ ಹಾರಿಸ್  (29) ಹಾಗೂ ಮಾಳಿಯಂಗರ ಕೋಟದ ಲತೀಫ್ (36) ಎಂದು ಗುರುತಿಸಲಾಗಿದೆ.

ಈ ಪೈಕಿ ಮಾಂಙಮುಡಿ ಸಿದ್ದೀಕ್ ಬಿ.ಎಂ.ಎಸ್. ಕಾರ್ಯಕರ್ತ, ಆಟೋ ಚಾಲಕ ದಯಾನಂದರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಳಿಕ ಖುಲಾಸೆಗೊಂಡಿದ್ದನು. ಉಮ್ಮರ್ ಫಾರೂಕ್ ಕುಂಬಳೆಯಲ್ಲಿ ಫುಟ್ಬಾಲ್ ವಿವಾದಕ್ಕೆ ಸಂಬಂಧಿಸಿ ನಡೆದ ಯುವಕನ ಕೊಲೆ ಪ್ರಕರಣದ ಆರೋಪಿಯಾಗಿ ದ್ದಾನೆ.

ಎ.29ರಂದು ರಾತ್ರಿ ಸಿದ್ದಿಕ್ ನ ಮನೆಗೆ ಬಂದಿದ್ದ ಅಬ್ದುಲ್ ಸಲಾಂ ಹಾಗೂ ಇತರ ಮೂವರು ಸಿದ್ದೀಕ್ ನ ತಾಯಿ ಮತ್ತು ಪತ್ನಿಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದು, ಇದರಿಂದ ಕೆರಳಿದ್ದ ಸಿದ್ದೀಕ್ ಕೊಲೆಗೆ ಸಂಚು ರೂಪಿಸಿದ್ದನು. ಅಬ್ದುಲ್ ಸಲಾಂಗೆ ಕರೆ ಮಾಡಿದ ಸಿದ್ದೀಕ್ ವೈಮಸ್ಸನ್ನು ರಾಜಿಸಂಧಾನದಲ್ಲಿ ಮುಗಿಸುವ ಎಂದು ಹೇಳಿ ಪೆರುವಾಡ್ ನ ಸ್ಥಳವೊಂದಕ್ಕೆ ಬರಲು ಹೇಳಿದ್ದನು. ಇದರಂತೆ ಅಬ್ದುಲ್ ಸಲಾಂ ಸ್ನೇಹಿತ ನೌಶಾದ್ ಜೊತೆ ತೆರಳಿದ್ದು, ಈ ಸಂದರ್ಭ ಹೊಂಚು ಹಾಕಿ ಕುಳಿತಿದ್ದ ಸಿದ್ದೀಕ್ ನೇತೃತ್ವದ ತಂಡವು ದಾಳಿ ನಡೆಸಿ ಅಬ್ದುಲ್ ಸಲಾಂನನ್ನು ಕೊಲೆಗೈದು, ತಲೆಯನ್ನು ಕತ್ತರಿಸಿತ್ತು. ಜೊತೆಗಿದ್ದ ನೌಶಾದ್ ನ ಮೇಲೂ ಮಾರಕಾಯುಧದಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಮರಳು ಮಾಫಿಯಾದ ವೈಮನಸ್ಸು ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಬ್ದುಲ್ ಸಲಾಂ ಕೊಲೆ ಪ್ರಕರಣದಲ್ಲಿ ಒಟ್ಟು 8 ಮಂದಿ ಆರೋಪಿಗಳಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ.ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಬಳಸಿದ ಮಾರಕಾಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೃತ್ಯದ ಬಳಿಕ ರಕ್ತ ಕಲೆಯಿದ್ದ ಆರೋಪಿಗಳ ಬಟ್ಟೆಗಳನ್ನು ಕುಂಟಗೇರಡ್ಕ ಸಮೀಪದ ಸ್ಮಶಾನದಲ್ಲಿ ಸುಟ್ಟಿರುವುದು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News