×
Ad

ಮಾನಸಿಕ ಅಸ್ವಸ್ಥನಿಂದ ​ಹಲ್ಲೆಗೊಳಗಾದ ಬಾಲಕಿ ಮೃತ್ಯು: ಕೊಲೆ ಪ್ರಕರಣ ದಾಖಲು

Update: 2017-05-04 22:21 IST

ಕಾರ್ಕಳ, ಮೇ 4: ಕೆದಿಂಜೆ ಎಂಬಲ್ಲಿ ಮೇ 1ರಂದು ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮೃತ ಬಾಲಕಿಯನ್ನು ಕೆದಿಂಜೆಯ ಸ್ವಪ್ನಾ ಎಂಬವರ ಮಗಳು ಮನ್ವಿ(10) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಕೊಡಗು ಜಿಲ್ಲೆಯ ಸೋಮ ವಾರ ಪೇಟೆಯ ಲೀಲಾಧರ್(40) ಎಂಬಾತನನ್ನು ಪೊಲೀಸರು ಅದೇ ದಿನ ಬಂಧಿಸಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಆತ ಇದೀಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಲೀಲಾಧರ್ ಕಬ್ಬಿಣದ ಹಾರೆ ಹಿಡಿದುಕೊಂಡು ಸ್ವಪ್ನಾ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಸ್ವಪ್ನಾರ ತಂಗಿ ಅರ್ಚನಾ ಶೆಟ್ಟಿ ಹಾಗೂ ತಾಯಿ ರೋಹಿಣಿ ಎಂಬವರಿಗೆ ಹಾರೆಯಿಂದ ಹಲ್ಲೆ ಮಾಡಿದ್ದ. ಬಳಿಕ ಮನೆಯಲ್ಲಿ ಮಲಗಿದ್ದ ಸ್ವಪ್ನಾರ ಮಗಳು ಮನ್ವಿಯ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಮನೆಯವರ ಬೊಬ್ಬೆ ಕೇಳಿ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಮನ್ವಿಯನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News