ಸಂಘಪರಿವಾರ ಕಾರ್ಯಕರ್ತರಿಂದ ಕೊರಗರ ಮೇಲಿನ ಹಲ್ಲೆ ಖಂಡಿಸಿ ಸಿಪಿಎಂ ಪ್ರತಿಭಟನೆ
ಗಂಗೊಳ್ಳಿ, ಮೇ 4: ದನದ ಮಾಂಸ ಸೇವನೆ ಆರೋಪ ಹೊರಿಸಿ ಮೊವಾಡಿ ಗಾಣದಮಕ್ಕಿ ಕೊರಗ ಕಾಲನಿಯ ಕೊರಗ ಸಮುದಾಯದ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ಸಿಪಿಎಂ ಬೈಂದೂರು ವಲಯ ಸಮಿತಿಯು ಗುರುವಾರ ಗಂಗೊಳ್ಳಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿತು.
ಹಲ್ಲೆಗೆ ಒಳಗಾದ ಕೊರಗ ಕುಟುಂಬದ ಸಂತ್ರಸ್ಥರೊಂದಿಗೆ ಪಾದಯಾತ್ರೆ ನಡೆಸಿದ ಸಿಪಿಎಂ ಕಾರ್ಯಕರ್ತರು ಗಂಗೊಳ್ಳಿ ಪೊಲೀಸ್ ಠಾಣೆ ಎದುರು ಮಕ್ಕಳು, ಮಹಿಳೆಯರ ಮೇಲೆ ಸಂಘಪರಿವಾರ ನಡೆಸಿದ ದೌರ್ಜನ್ಯವನ್ನು ಖಂಡಿಸಿದರು. ದೌರ್ಜನ್ಯಕ್ಕೊಳಗಾದ ಕೊರಗ ಯುವಕರ ಮೇಲೆ ಹಾಕಲಾಗಿ ರುವ ಮೊಕದ್ದಮೆಗಳನ್ನು ಕೂಡಲೇ ಹಿಂಪಡೆಯಬೇಕು. ಆರೋಪಿಗಳ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು. ಸಂತ್ರಸ್ಥರಿಗೆ ಪರಿಹಾರ ಒದಗಿಸ ಬೇಕು. ಗ್ರಾಪಂ ಸದಸ್ಯೆ ಶಕುಂತಳಾರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನ ಮಾಡಿದವರನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡ ರಾದ ಕೆ.ಶಂಕರ್, ಎಚ್.ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.