ರಸ್ತೆಯ ಮಧ್ಯಭಾಗದಲ್ಲಿ ನಿಲ್ಲುವ ಬಸ್ ಗಳ ವಿರುದ್ಧ ಕ್ರಮ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಮೇ 3: ಜನರನ್ನು ಹತ್ತಿಸಲು ಮತ್ತು ಇಳಿಸಲು ರಸ್ತೆಯ ಮಧ್ಯಭಾಗದಲ್ಲೇ ಹಠಾತ್ ಆಗಿ ನಿಲ್ಲುವ ಬಸ್ ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸೂಚಿಸಿದ್ದಾರೆ.
ನಗರದ ಆರ್‌ಟಿಒ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಸಭೆಯಲ್ಲಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅಹವಾಲಿಗೆ ಪ್ರತಿಕ್ರಿಯಿಸಿದ ಅವರು, ಬಸ್‌ಗಳ ನಿಯಮ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಲು ಆರ್‌ಟಿಒ ಕಚೇರಿಯಲ್ಲಿ ಹೆಲ್ಪ್‌ಲೈನ್ ಆರಂಭಿಸಿ, ಜನರ ದೂರಿನಂತೆ, ಕೂಡಲೇ ಸ್ಥಳಕ್ಕೆ ಆಗಮಿಸಿ, ಅಥವಾ ಅಂತಹ ಬಸ್‌ನ್ನು ಹಿಂಬಾಲಿಸಿ ವಶಕ್ಕೆ ಪಡೆದು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸ್ಟೇಟ್ ಬ್ಯಾಂಕ್‌ನಿಂದ ಹೊರಟ ಬಸ್‌ಗಳು ಅಂಬೇಡ್ಕರ್ ವೃತ್ತಕ್ಕೆ ಬರಲು 20 ನಿಮಿಷ ತೆಗೆದುಕೊಳ್ಳುತ್ತಿವೆ. ಸ್ಟೇಟ್‌ಬ್ಯಾಂಕ್‌ನಿಂದ ಹೊರಟ ಬಸ್ಸುಗಳು ನಿಧಾನವಾಗಿ ಚಲಿಸುತ್ತಾ ನಿಲ್ದಾಣಗಳಲ್ಲಿ ಜನರಿಗಾಗಿ ಕಾಯುತ್ತಾ ನಿಲ್ಲುತ್ತವೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ವ್ಯಕ್ತಿಯೊಬ್ಬರು ದೂರಿದರು.
ನಗರದ ಸ್ಟೇಟ್ ಬ್ಯಾಂಕ್‌ನಿಂದ ಅಂಬೇಡ್ಕರ್ ವೃತ್ತದ ತನಕ ಸಂಚರಿಸುವ ಬಸ್‌ಗಳು ಕಡ್ಡಾಯವಾಗಿ ರಸ್ತೆಯ ಎಡಬದಿಯಲ್ಲೇ ಸಂಚರಿಸಬೇಕು. ಜನ ಹತ್ತಿದ ತಕ್ಷಣ ಬಸ್ ಮುಂದೆ ಚಲಾಯಿಸಿಕೊಂಡು ಹೋಗಬೇಕು. ಇನ್ನು ಮುಂದೆ ಅನಗತ್ಯವಾಗಿ ಜನರನ್ನು ಕಾಯುತ್ತಾ ಬಸ್ ನಿಲ್ಲಿಸಬಾರದು. ಸಿಕ್ಕ ಸಿಕ್ಕಲ್ಲಿ ನಿಲ್ಲಿಸಿದರೆ ಅಂತಹ ಬಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಬಸ್ ಪಕ್ಕದಲ್ಲೂ ನಂಬರ್ ಹಾಗೂ ಸಂಚರಿಸುವ ಊರುಗಳ ಹೆಸರು ಹಾಕಿ. ಮುಂದಿನ ಬಾಗಿಲಿನಿಂದ ಮಹಿಳೆಯರು ಮತ್ತು ಹಿಂದಿನ ಬಾಗಿಲಿನಿಂದ ಪುರುಷರು ಹತ್ತುವುದನ್ನು ಕಡ್ಡಾಯಗೊಳಿಸಿ ಎಂದು ಡಾ.ಜಗದೀಶ್ ಸೂಚಿಸಿದರು.
ಹಿರಿಯ ನಾಗರಿಕರಿಗೆ ನಾಲ್ಕು ಸೀಟುಗಳು
ಖಾಸಗಿ ಮತ್ತು ಸರಕಾರಿ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಈಗಿರುವ ಎರಡು ಸೀಟನ್ನು ತಕ್ಷಣದಿಂದ ನಾಲ್ಕು ಸೀಟಿಗೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಖಾಸಗಿ ಬಸ್ಸು ಮಾಲಕರು ಹಾಗೂ ಕೆಎಸ್ಸಾರ್ಟಿಸಿಗೆ ಸೂಚಿಸಿದರು. ನಾಲ್ಕು ಸೀಟುಗಳು ಹಿರಿಯ ನಾಗರಿಕರಿಗೆ ಕಡ್ಡಾಯವಾಗಿ ಮೀಸಲಿಡಬೇಕು. ಅವರಿಲ್ಲದಿರುವಾಗ ಆ ಸೀಟನ್ನು ಇತರ ಪ್ರಯಾಣಿಕರು ಬಳಸಬಹುದು. ಆದರೆ, ಅವರಿರುವಾಗ ಸೀಟನ್ನು ಬಿಟ್ಟುಕೊಡಬೇಕು ಎಂದು ಡಿಸಿ ಹೇಳಿದರು.
ಶಾಲಾ-ಕಾಲೇಜು ಸಮಯ ನಿಗದಿ ಒತ್ತಾಯ
ಮಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು ಶಾಲೆ, ಕಾಲೇಜುಗಳನ್ನು ಬಿಡುವ ಸಮಯ ಬದಲಾಯಿಸುವಂತೆ ಸಭೆಯಲ್ಲಿ ವ್ಯಕ್ತಿಯೊಬ್ಬರು ಅಹವಾಲು ಸಲ್ಲಿಸಿದರು. ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಡಿಡಿಪಿಐಗೆ ನಿರ್ದೇಶನ ನೀಡಿದರು.
ಡಿಸಿಪಿ ಡಾ.ಎಂ.ಸಂಜೀವ್ ಪಾಟೀಲ್, ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ, ಪ್ರಭಾರ ಆರ್‌ಟಿಒ ಎಸ್.ಜಿ.ಹೆಗಡೆ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್, ಇಸ್ಮಾಯಿಲ್, ಬಸ್, ರಿಕ್ಷಾ ಮಾಲಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಚರ್ಚೆಯಲ್ಲಿ ಭಾಗವಹಿಸಿದ್ದರು.
ನಿರ್ಣಯಗಳು
- ಒಂದೇ ಬಸ್ ಸಂಚರಿಸುವ ಕಟೀಲ್-ಧರ್ಮಸ್ಥಳಕ್ಕೆ ಮುಂದಿನ ವಾರ ಇನ್ನೊಂದು ಬಸ್ ಸಂಚಾರ ಆರಂಭ.
- ಸ್ಟೇಟ್ ಬ್ಯಾಂಕ್‌ನಿಂದ ಮುಡಿಪು ಸಂಚರಿಸುವ ಎರಡು ಬಸ್‌ಗಳು ಕೊಣಾಜೆ ವಿಶ್ವವಿದ್ಯಾನಿಲಯ ಮೂಲಕ ಸಂಚರಿಸಬೇಕು. ಇದಕ್ಕಾಗಿ ಟೈಮಿಂಗ್ ಹೊಂದಾಣಿಕೆ ಮಾಡಿಕೊಳ್ಳಬೇಕು.
- ಸರಕಾರಿ ಬಸ್‌ನಲ್ಲಿ ಉಚಿತವಾಗಿ ಸಂಚರಿಸುವ ಒಂದರಿಂದ ಏಳನೇ ತರಗತಿ ವರಗಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಸ್ ಪಡೆದುಕೊಳ್ಳಬೇಕು.
- ಆಟೊ ರಿಕ್ಷಾಗಳಿಗೆ ಜಿಪಿಎಸ್ ಅಳವಡಿಸಲು ಸಮಸ್ಯೆ ಇಲ್ಲ. ರಿಕ್ಷಾದ ಹಿಂಭಾಗದಲ್ಲಿ ಜಾಹೀರಾತು ಅಳವಡಿಸುವುದು ಬೇಡ. ಒಳಗೆ ಬೇಕಾದರೆ ಅಳವಡಿಸಬಹುದು.
- 2006ರ ಸರಕಾರಿ ಆದೇಶ ಪ್ರಕಾರ ಉಳ್ಳಾಲ ಕೂಡಾ ವಲಯ-1ರಲ್ಲಿ ಇರುವುದರಿಂದ ಅಲ್ಲಿಯ ಆಟೊ ರಿಕ್ಷಾಗಳು ಮಂಗಳೂರಿನಲ್ಲಿ ಸಂಚರಿಸಲು ಯಾವುದೇ ಸಮಸ್ಯೆ ಇಲ್ಲಘಿ. ಈ ವಿಷಯದಲ್ಲಿ ಮತೆತಿ ಗೊಂದಲ ಸೃಷ್ಟಿಸಬಾರದು.