×
Ad

​ಬೀದಿಬದಿ ವ್ಯಾಪಾರಸ್ಥರ ಮೇಲಿನ ದಾಳಿ ಖಂಡಿಸಿ ವಾಹನ ಪ್ರಚಾರ ಜಾಥಾ

Update: 2017-05-04 22:58 IST

ಮಂಗಳೂರು, ಮೇ 4: ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿ ಸಿಐಟಿಯುಗೆ ಸಂಯೋಜಿತಗೊಂಡಿರುವ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಮಂಗಳೂರು ನಗರದಾದ್ಯಂತ ಗುರುವಾರ ವಾಹನ ಪ್ರಚಾರ ಜಾಥಾವನ್ನು ನಡೆಯಿತು.

ನಗರದ ಸ್ಟೇಟ್‌ಬ್ಯಾಂಕ್ ಬಳಿಯಲ್ಲಿ ಪ್ರಾರಂಭಗೊಂಡ ಜಾಥಾದ ಉದ್ಘಾಟನೆಯನ್ನು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ನಗರದಲ್ಲಿ ಯಾವುದೇ ಸಮಸ್ಯೆಗಳು ತಲೆದೋರಿದರೂ, ಅದಕ್ಕೆ ಬೀದಿಬದಿ ವ್ಯಾಪಾರಸ್ಥರೇ ನೇರಹೊಣೆ ಎಂಬಂತೆ ಮಂಗಳೂರು ಮಹಾನಗರ ಪಾಲಿಕೆ ವರ್ತಿಸುತ್ತಿದೆ. ಬೀದಿಬದಿ ವ್ಯಾಪಾರಸ್ಥರ ಪ್ರಬಲ ಹೋರಾಟದ ಭಾಗವಾಗಿ ಸಂಸತ್ತಿನಲ್ಲಿ ಮಸೂದೆಯೊಂದು ಜಾರಿಗೊಂಡಿದೆ. ರಾಜ್ಯ ಸರಕಾರವೂ ಕೂಡ ವಿಶೇಷ ನಿಯಮಾವಳಿಯನ್ನು ರೂಪಿಸಿದೆ. ಆದರೆ ಸ್ಥಳೀಯಾಡಳಿತಗಳು ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

6 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಟೈಗರ್ ಕಾರ್ಯಾಚರಣೆಯನ್ನು ನಡೆಸಿದ ಅಂದಿನ ಬಿಜೆಪಿ ನೇತೃತ್ವದ ಮನಪಾ ಆಡಳಿತದ ವಿರುದ್ಧ ಹೋರಾಟ ನಡೆಸಿದ್ದರ ಫಲವಾಗಿ ಸರ್ವೇ ಕಾರ್ಯ ನಡೆದಿದೆ. ಬಳಿಕ ಸಮೀಕ್ಷೆ ನಡೆಸಿ ನಿಜವಾದ ಬೀದಿಬದಿ ವ್ಯಾಪಾರಸ್ಥರಿಗೆ ಗುರುತು ಚೀಟಿ ನೀಡಬೇಕೆಂದಿದ್ದರೂ ಕೇವಲ 208 ಮಂದಿಗೆ 2 ವರ್ಷಗಳ ಹಿಂದೆ ಗುರುತು ಚೀಟಿ ನೀಡಲಾಗಿದೆ. ಉಳಿದವರಿಗೆ ಕೊಡಬೇಕೆಂದು ಹಲವು ಬಾರಿ ತೀರ್ಮಾನವಾಗಿದ್ದರೂ ಇನ್ನೂ ಕೂಡ ನೀಡಿಲ್ಲ. 208 ಮಂದಿಯ ಗುರುತುಚೀಟಿಯ ಅವಧಿ ಮುಗಿದಿದ್ದರೂ, ಮರು ನೋಂದಣಿಯಾಗಿಲ್ಲ. ಪರ್ಯಾಯ ವ್ಯವಸ್ಥೆಯ ಭಾಗವಾಗಿ ವೆಂಡಿಂಗ್ ಝೋನ್ ರಚನೆಗೊಂಡು ಆತುರಾತುರವಾಗಿ ಉದ್ಘಾಟನೆಗೊಂಡರೂ, ಅದಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಾಥಾವು ಹಂಪನಕಟ್ಟೆ, ಕಂಕನಾಡಿ, ಪಂಪ್‌ವೆಲ್, ಕೆಎಸ್ಸಾರ್ಟಿಸಿ, ಬೊಂದೇಲ್, ಕಾವೂರು, ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ಸುಮಾರು 15 ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಲೇಡಿಗೋಷನ್ ಜಂಕ್ಷನ್‌ನಲ್ಲಿ ಸಮಾರೋಪಗೊಂಡಿತು.

ಜಾಥಾದ ಸಮಾರೋಪ ಭಾಷಣ ಮಾಡಿದ ಸಂಘದ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ , ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಮನಪಾ ಆಡಳಿತವು ದಾಳಿ ನಡೆಸುತ್ತಿರುವುದು ಖಂಡನೀಯವಾಗಿದೆ. ನಗರದ ಶೇ.5 ರಸ್ತೆಗಳ ಬದಿಯಲ್ಲಿ ಬೀದಿಬದಿ ವ್ಯಾಪಾರಸ್ಥರಿದ್ದು, ಉಳಿದ ಶೇ. 95 ರಸ್ತೆಗಳ ಬದಿಯಲ್ಲಿ ವಾಹನ ಪಾರ್ಕಿಂಗ್ ಇದ್ದು, ಬಹುಮಹಡಿ ಕಟ್ಟಡಗಳ ಮಾಲಕರು ರಸ್ತೆಗಳನ್ನು ಅತಿಕ್ರಮಿಸಿದ್ದರೂ ನಗರದ ಎಲ್ಲಾ ಸಮಸ್ಯೆಗಳಿಗೆ ಬೀದಿಬದಿ ವ್ಯಾಪಾರಸ್ಥರೇ ಕಾರಣ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜಾಥಾದಲ್ಲಿ ಸಿಐಟಿಯು ಜಿಲ್ಲಾ ಮುಖಂಡರು ಯೋಗೀಶ್ ಜಪ್ಪಿನಮೊಗರು, ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಎಸ್, ಜಿಲ್ಲಾ ಮುಖಂಡರಾದ ಮುಹಮ್ಮದ್ ಆಸಿಫ್, ಮುಝಫರ್, ಅಬ್ದುಲ್ ಖಾದರ್, ಹಿತೇಶ್ ಪೂಜಾರಿ, ಆದಂ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News