ಮಧ್ವಾಚಾರ್ಯರು ದಲಿತ, ಶೂದ್ರ ವಿರೋಧಿಯಲ್ಲ: ಪೇಜಾವರ ಶ್ರೀ
ಉಡುಪಿ, ಮೇ 4: ಮಧ್ವಾಚಾರ್ಯರು, ದಲಿತರು ಸಹಿತ ಎಲ್ಲ ವರ್ಗದವರು ಕೂಡ ಭಕ್ತಿಯ ಮಾರ್ಗದ ಮೂಲಕ ಮೋಕ್ಷ ಪಡೆಯಬಹುದು ಎಂದು ಹೇಳಿದ್ದಾರೆ. ಬಸವಣ್ಣ ಕೂಡ ಶಿವಭಕ್ತರೆಲ್ಲರು ಸಮಾನರು ಎಂಬ ಸಂದೇಶವನ್ನು ನೀಡಿದ್ದಾರೆ. ಬಸವಣ್ಣ ಶಿವ ದೀಕ್ಷೆ ಹೇಳಿದರೆ ಮಧ್ವಾಚಾರ್ಯರು ಹರಿದೀಕ್ಷೆಯನ್ನು ಪ್ರತಿಪಾದಿಸಿದ್ದಾರೆ. ಬಸವಣ್ಣರಂತೆ ಮಧ್ವಾಚಾರ್ಯರು ಕೂಡ ಸಮಾನತೆ ಸಂದೇಶವನ್ನು ಸಾರಿದ್ದಾರೆ. ಆದರೂ ಮಧ್ವಾಚಾರ್ಯರನ್ನು ದಲಿತ, ಶೂದ್ರ ವಿರೋಧಿ ಎಂಬುದಾಗಿ ಬಿಂಬಿಸಲಾಗುತ್ತದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಗುರುವಾರ ರಾಜಾಂಗಣದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀರಾಮವಿಠಲ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
"ನನ್ನನ್ನು ವಿವಾದಾತ್ಮಕ ಸ್ವಾಮೀಜಿ ಎಂಬುದಾಗಿ ಬಿಂಬಿಸಲಾಗುತ್ತಿದೆ. ನಾನು ರಾಮ, ಕೃಷ್ಣ, ಮಧ್ವಾಚಾರ್ಯರು ಹಾಗೂ ಹಿಂದು ಧರ್ಮಕ್ಕೆ ಅಪಚಾರ ಉಂಟಾದಾಗ ಯಾವುದೇ ಸಂಕೋಚವಿಲ್ಲದೆ ವಿರೋಧ ವ್ಯಕ್ತಪಡಿಸುತ್ತೇನೆ. ಇವರ ಮೇಲಿನ ಆರೋಪಗಳಿಗೆ ನಾನು ಉತ್ತರ ಕೊಡುತ್ತ ಬಂದರೂ ಅದನ್ನು ಅರ್ಥ ಮಾಡಿಕೊಳ್ಳಲಾಗದ ಪ್ರಗತಿಪರ ಚಿಂತಕರು ಮತ್ತೆ ಮತ್ತೆ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಶಂಭೂಕನನ್ನು ಕೊಂದ ರಾಮ ಶೂದ್ರ ವಿರೋಧಿ ಎಂಬ ಆರೋಪಗಳ ಬಗ್ಗೆ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದೇನೆ. ಆದರೆ ಅವರಿಗೆ ಅರ್ಥವೇ ಆಗುವುದಿಲ್ಲ" ಎಂದರು.
"ಸ್ವಾಮೀಜಿಗಳಲ್ಲಿ ಹಲವು ರೀತಿಯ ಭಿನ್ನತೆ ಇದ್ದರೂ ನಾವು ಸಾಮರಸ್ಯದೊಂದಿಗೆ ಇದ್ದೇವೆ. ಅದೇ ರೀತಿ ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗಳಲ್ಲಿ ಭಿನ್ನತೆ ಇದ್ದರೂ ನಾವೆಲ್ಲ ಸಾಮರಸ್ಯದಿಂದ ಇರಬೇಕು. ಇದಕ್ಕೆ ನಾನು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತ ಬರುತ್ತಿದ್ದೇನೆ. ಧರ್ಮದಲ್ಲಿ ಭಿನ್ನತೆ ಇದ್ದರೂ ಸಮಾಜದಲ್ಲಿ ಶಾಂತಿ ನೆಲೆಯೂರುವುದು ಅತಿಮುಖ್ಯ" ಎಂದು ಅವರು ಹೇಳಿದರು.
ಕಬಿಯಾಡಿ ಜಯರಾಮ ಆಚಾರ್ಯ, ಡಾ.ಸಿಮಂತೂರು ನಾರಾಯಣ ಶೆಟ್ಟಿ, ಕುರಿಯಗಣಪತಿ ಶಾಸ್ತ್ರಿ, ಡಾ.ಜಿ.ಎಸ್.ಚಂದ್ರಶೇಖರ್, ಮಾರ್ಗೋಳಿ ಗೋವಿಂದ ಸೇರಿಗಾರ, ಮನೋಹರ ಪ್ರಸಾದ್, ಜಬ್ಬಾರ್ ಸಮೋ, ಡಾ.ಕೆ. ಕೃಷ್ಣಪ್ರಸಾದ್, ನಂದಳಿಕೆ ಬಾಲಚಂದ್ರ ರಾವ್, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ, ಡಾ.ರವಿಚಂದ್ರ ರಾವ್, ಚಪ್ಪರಮನೆ ಶ್ರೀಧರ ಹೆಗಡೆ, ಶಿವಾನಂದ ಭಂಡ ರ್ಕಾರ್ ಅವರಿಗೆ ರಾಮವಿಠಲ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಠದ ಸಾಂಸ್ಕೃತಿಕ ಕಾರ್ಯದರ್ಶಿ ಪ್ರೊ.ಎಂ.ಎಲ್.ಸಾಮಗ ಸ್ವಾಗತಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.