ನಿರ್ಭಯಾ ಪ್ರಕರಣದ ತೀರ್ಪು ಇಂದು: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸುವುದೇ ಸುಪ್ರೀಂ ಕೋರ್ಟ್?

Update: 2017-05-05 03:18 GMT

ಹೊಸದಿಲ್ಲಿ, ಮೇ 5: ದೇಶವನ್ನೇ ಬೆಚ್ಚಿ ಬೀಳಿಸಿದ್ದ ರಾಜಧಾನಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟ ನಾಲ್ಕು ಮಂದಿಯ ಗಲ್ಲು ಶಿಕ್ಷೆ ಖಾಯಂ ಆಗುವುದೇ ಇಲ್ಲವೇ, ಅವರಿಗೆ ಜೀವಾವಧಿ ಶಿಕ್ಷೆಯಾಗುವುದೇ ಎಂಬುದು ಇಂದು ನಿರ್ಧರಿತವಾಗಲಿದೆ. ಜಸ್ಟಿಸ್ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್ ಆರ್. ಭಾನುಮತಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ವಿಚಾರಣಾ ನ್ಯಾಯಾಲಯವೊಂದು ಪ್ರಕರಣದ ನಾಲ್ಕು ಮಂದಿ ಆರೋಪಿಗಳಾಗಿದ್ದ ಅಕ್ಷಯ್ ಠಾಕೂರ್, ವಿನಯ್ ಶರ್ಮ, ಪವನ್ ಗುಪ್ತಾ ಹಾಗೂ ಮಹೇಶ್ ಅವರಿಗೆ 2013ರಲ್ಲಿ ಮರಣದಂಡನೆ ಶಿಕ್ಷೆ ಘೋಷಿಸಿದ್ದರೆ ಮುಂದಿನ ವರ್ಷ ಹೈಕೋರ್ಟ್ ಕೂಡ ಈ ಶಿಕ್ಷೆಯನ್ನು ಖಾಯಂಗೊಳಿಸಿತ್ತು. ಆದರೆ ನಾಲ್ಕು ಮಂದಿಯೂ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು.

ನ್ಯಾಯಾಲಯದ ತೀರ್ಪು ಏನೇ ಆದರೂ ನಾಲ್ಕು ಮಂದಿಯೂ ಸದ್ಯದಲ್ಲಿ ನೇಣುಗಂಬಕ್ಕೇರುವ ಸಾಧ್ಯತೆ ಕಡಿಮೆ. 2015ರಲ್ಲಿ ಅವರಿಗೆ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರ ನಂತರವಷ್ಟೇ ಅವರು ನಿರ್ಭಯಾ ಪ್ರಕರಣದ ಆರೋಪಿಗಳೆಂದು ತಿಳಿದು ಬಂದಿತ್ತು. ಏನೇ ಇದ್ದರೂ ಅವರು ತಮ್ಮ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ಮೊದಲು ಪೂರೈಸಲೇ ಬೇಕಾಗುತ್ತದೆ. ಈ ಶಿಕ್ಷೆಯ ವಿರುದ್ಧವೂ ಆರೋಪಿಗಳು ಮಾಡಿದ ಮೇಲ್ಮನವಿ ಹೈಕೋರ್ಟಿನಲ್ಲಿ ವಿಲೇವಾರಿಗೆ ಬಾಕಿಯಿದೆ.

ನಿರ್ಭಯಾಳ ಮೇಲೆ ಡಿಸೆಂಬರ್ 16, 2012ರ ರಾತ್ರಿ ಚಲಿಸುತ್ತಿರುವ ಬಸ್ಸೊಂದರಲ್ಲಿ ಅಮಾನುಷವಾಗಿ ಅತ್ಯಾಚಾರ ನಡೆದಿದ್ದರೆ ಆ ಬಸ್ಸಿನ ಚಾಲಕನಾಗಿದ್ದ ರಾಮ್ ಸಿಂಗ್ ಮಾರ್ಚ್ 2013ರಲ್ಲಿ ತಿಹಾರ್ ಜೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಇನ್ನೊಬ್ಬ ಆರೋಪಿ ವಿನಯ್ ಶರ್ಮ ಕೂಡ ಕಳೆದ ಆಗಸ್ಟ್ ತಿಂಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ.
ಪ್ರಕರಣದ ಆರನೇ ಆರೋಪಿಗೆ ಘಟನೆ ನಡೆದಾಗ 18 ವರ್ಷ ತುಂಬದೇ ಇದ್ದ ಕಾರಣ ಮೂರು ವರ್ಷ ರಿಮಾಂಡ್ ಹೋಂನಲ್ಲಿದ್ದ. ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಗೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News