ಸೇನೆಯ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪ : ಪಾಕ್ ಪ್ರಧಾನಿ ವಿರುದ್ಧ ಮೊಕದ್ದಮೆ

Update: 2017-05-05 14:10 GMT

ಇಸ್ಲಾಮಾಬಾದ್, ಮೇ 5: ಸೇನೆಯ ವಿರುದ್ಧ ಜನರನ್ನು ಎತ್ತಿಕಟ್ಟಿರುವುದಕ್ಕಾಗಿ ಹಾಗೂ ಅದರ ವಿರುದ್ಧ ಜನರಲ್ಲಿ ದ್ವೇಷ ತುಂಬಿರುವುದಕ್ಕಾಗಿ ಪಾಕಿಸ್ತಾನದ ಪೊಲೀಸರು ದೇಶದ ಪ್ರಧಾನಿ ನವಾಝ್ ಶರೀಫ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಐಎಂ ಪಾಕಿಸ್ತಾನ್ ಪಾರ್ಟಿ ಅಧ್ಯಕ್ಷ ತಾನೆಂದು ಹೇಳಿಕೊಂಡಿರುವ ವಕೀಲ ಇಶ್ತಿಯಾಕ್ ಅಹ್ಮದ್ ಮಿರ್ಝಾ ರಾವಲ್ಪಿಂಡಿಯ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ಸಲ್ಲಿಸಿದ್ದಾರೆ.

ಆದಾಗ್ಯೂ, ಪೊಲೀಸರು ದಾಖಲಿಸಿಕೊಂಡಿರುವ ಒಂದು ಪುಟದ ವರದಿ ಎಫ್‌ಐಆರ್ ಆಗಿರುವುದಿಲ್ಲ. ಅದನ್ನು ಸ್ಥಳೀಯ ಭಾಷೆಯಲ್ಲಿ ‘ರೋಝ್‌ನಾಮ್ಚ’ ಎಂದು ಕರೆಯುತ್ತಾರೆ ಎಂದು ‘ದ ಡಾನ್’ ಪತ್ರಿಕೆ ವರದಿ ಮಾಡಿದೆ.

ತನಗೆ ವಾಟ್ಸ್‌ಆ್ಯಪ್‌ನಲ್ಲಿ ವೀಡಿಯೊ ತುಣುಕೊಂದು ಬಂದಿದ್ದು, ಅದು ಓರ್ವ ವ್ಯಕ್ತಿ ಭಾಷಣ ಮಾಡುವುದನ್ನು ತೋರಿಸುತ್ತದೆ ಎಂದು ಮಿರ್ಝಾ ಹೇಳಿದ್ದಾರೆ. ಭಾಷಣ ಮಾಡುವ ವ್ಯಕ್ತಿ ಶರೀಫ್ ಆಗಿದ್ದು, ಅವರು ಸಶಸ್ತ್ರ ಪಡೆಗಳ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದರು ಹಾಗೂ ದ್ವೇಷಭಾವನೆಯನ್ನು ತುಂಬುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ 70 ವರ್ಷಗಳ ಇತಿಹಾಸದಲ್ಲಿ 33 ವರ್ಷಕ್ಕೂ ಅಧಿಕ ಅವಧಿಯಲ್ಲಿ ಸೇನೆಯೇ ದೇಶವನ್ನು ಆಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News