×
Ad

ಅಂಗಡಿಗೆ ನುಗ್ಗಿ ವ್ಯಾಪಾರಿಯ ಕೊಲೆ: ಇಬ್ಬರು ಪೊಲೀಸ್ ಕಸ್ಟಡಿಯಲ್ಲಿ?

Update: 2017-05-05 20:00 IST
ಮೃತ ರಾಮಕೃಷ್ಣ 

ಮಂಜೇಶ್ವರ, ಮೇ 5: ಪೈವಳಿಕೆ ಸಮೀಪದ ಕಯ್ಯಾರು ಬಳಿಯ ಮಂಡೆಕಾಪು ಎಂಬಲ್ಲಿ ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಕಡಿದು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ. ಬದಿಯಡ್ಕ ನಿವಾಸಿಗಳಾದ ಇಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಮಂಡೆಕಾಪು ನಿವಾಸಿ ದಿ. ಸುಬ್ಬ ಮೂಲ್ಯ-ದಿ. ಬಾಗೀರಥಿ ದಂಪತಿಯ ಪುತ್ರ ರಾಮಕೃಷ್ಣ (46) ಎಂಬವರನ್ನು ಗುರುವಾರ ಮಧ್ಯಾಹ್ನ ತಂಡವೊಂದು ಕಡಿದು ಕೊಲೆಗೈದಿತ್ತು. ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಅಂಗಡಿಗೆ ತಲುಪಿದ ತಂಡ ಬರ್ಬರ ಕೃತ್ಯ ನಡೆಸಿ ಕಾರಿನಲ್ಲಿ ಪರಾರಿಯಾಗಿತ್ತು. ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮಕೃಷ್ಣರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಕೊಲೆಗಡುಕರು ಕಪ್ಪುಬಣ್ಣದ ಕಾರಿನಲ್ಲಿ ಬಂದಿರುವುದಾಗಿ ಮಾಹಿತಿ ಲಭಿಸಿದ್ದು, ಇಬ್ಬರು ಕೃತ್ಯ ನಡೆಸುವಾಗ ಮೂವರು ಕಾರಿನಲ್ಲಿ ಕುಳಿತಿದ್ದರೆಂದೂ ಪರಿಸರ ನಿವಾಸಿಗಳು ತಿಳಿಸಿದ್ದಾರೆ. ಕಾರು ಪೆರ್ಮುದೆಯಾಗಿ ಪೈವಳಿಕೆಯತ್ತ ಒಳರಸ್ತೆಯಲ್ಲಿ ಪರಾರಿಯಾಗಿತ್ತು ಎನ್ನಲಾಗಿದೆ.

ಘಟನೆ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಮಂಜೇಶ್ವರ, ಕುಂಬಳೆ ಎಸ್.ಐಗಳು, ಸಿಐ ಮೊದಲಾದವರನ್ನೊಳಗೊಂಡ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ತನಿಖೆ ನಡೆಸಿತ್ತು. ಇದರಂತೆ ಎಲ್ಲಾ ಆರೋಪಿಗಳ ಕುರಿತು ಮಾಹಿತಿ ಲಭಿಸಿದೆ ಎನ್ನಲಾಗಿದೆ. ಉಳಿದ ಆರೋಪಿಗಳಿಗಾಗಿ ಕಾಸರಗೋಡು, ಚೆರ್ಕಳ, ಎಡನೀರು ಮುಂತಾದೆಡೆ ಪೊಲೀಸರು ದಾಳಿ ನಡೆಸಿದ್ದಾರೆ. 

ಕೊಲೆಗೀಡಾದ ರಾಮಕೃಷ್ಣರ ಮೃತದೇಹವನ್ನು ಉನ್ನತಮಟ್ಟದ ತಪಾಸಣೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಶುಕ್ರವಾರ ಮರಣೋತ್ತರ ಪರೀಕ್ಷೆ ಬಳಿಕ ಸ್ವ-ಗೃಹಕ್ಕೆ ತರಲಾಯಿತು.

ವ್ಯಾಪಾರಿಯ ಕೊಲೆಕೃತ್ಯವನ್ನು ಖಂಡಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಮುದೆ ಘಟಕ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ವರೆಗೆ ವ್ಯಾಪಾರಿಗಳು ಹರತಾಳ ಆಚರಿಸಿದರು. ಇದೇ ವೇಳೆ ಬಂದ್ಯೋಡು-ಧರ್ಮತ್ತಡ್ಕ ರೂಟ್‌ನಲ್ಲಿ ಬಸ್ ಸಂಚಾರ ಕೂಡಾ ಮೊಟಕುಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News