ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿಯ ಗುಂಡಿಟ್ಟು ಹತ್ಯೆ

Update: 2017-05-06 09:46 GMT

ವಾಷಿಂಗ್ಟನ್, ಮೇ 6: ಇಲ್ಲಿನ ಸ್ಯಾನ್‌ಜೋಸ್‌ನ ಲೌರಾ ವಿಲ್ಲಾ ಲೇನ್‌ನಲ್ಲಿ ಮಂಗಳೂರು ಮೂಲದ ದಂಪತಿಯನ್ನು ಯುವಕನೊಬ್ಬ ಗುಂಡಿಟ್ಟು ಸಾಯಿಸಿದ ಘಟನೆ ನಡೆದಿದೆ.

ದಂಪತಿಯನ್ನು ಸ್ಯಾನ್ ಜೋಸ್‌ನಲ್ಲಿರುವ ಅವರ ಮನೆಯಲ್ಲೇ ಹತ್ಯೆಗೈದ ದುಷ್ಕರ್ಮಿಯನ್ನು ಮೃತ ದಂಪತಿಯ ಪುತ್ರಿಯ ಮಾಜಿ ಪ್ರಿಯಕರ 24ರ ಹರೆಯದ ಮಿರ್ಝಾ ಟಾಟ್ಲಿಕ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದಾರೆ. ಈ ಘಟನೆ ಬುಧವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸಿಲಿಕಾನ್ ವ್ಯಾಲಿಯ ಟೆಕ್ ಎಕ್ಸಿಕೂಟಿವ್ ನರೇನ್ ಪ್ರಭು ಹಾಗೂ ಅವರ ಪತ್ನಿ ರೇನಾ ದುಷ್ಕರ್ಮಿಯ ಸೇಡಿಗೆ ಬಲಿಯಾಗಿದ್ದಾರೆ. ರೇನಾ ಮಂಗಳೂರಿನ ಬಜ್ಪೆ ಮೂಲದವರು.

ಪ್ರಭು-ರೇನಾ ದಂಪತಿಯ ಪುತ್ರಿ ರಾಚೆಲ್ ಅವರು ಮಿರ್ಝಾ ಟಾಟ್ಲಿಕ್‌ರನ್ನು ಪ್ರೀತಿಸುತ್ತಿದ್ದು, ಒಂದು ವರ್ಷದ ಹಿಂದೆ ಇವರಿಬ್ಬರು ಬೇರ್ಪಟ್ಟಿದ್ದರು. ಆದರೆ ಮಿರ್ಝಾ ಅವರು ಯುವತಿ ಹಾಗೂ ಆತನ ಕುಟುಂಬದವರಿಗೆ ಪೀಡಿಸುವುದನ್ನು ಮುಂದುವರಿಸಿದ್ದ. ‘‘ದುಷ್ಕರ್ಮಿಯು ಮೃತ ದಂಪತಿಯ ಪುತ್ರಿಯೊಂದಿಗೆ ಡೇಟಿಂಗ್ ಸಂಬಂಧ ಹೊಂದಿದ್ದ. ಆದರೆ ಇವರಿಬ್ಬರ ಸಂಬಂಧ ಕಳೆದ ವರ್ಷವೇ ಮುರಿದುಬಿದ್ದಿತ್ತು. ಆರೋಪಿಯ ವಿರುದ್ಧ ಗೃಹ ಹಿಂಸಾಚಾರದ ಪ್ರಕರಣವೂ ದಾಖಲಾಗಿದೆ’’ ಎಂದು ಸ್ಯಾನ್‌ಜೋಸ್ ಪೊಲೀಸ್ ಮುಖ್ಯಸ್ಥರಾದ ಗಾರ್ಸಿಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News